ಬೆಂಗಳೂರು: ರಾಜ್ಯದಲ್ಲಿ 1968-69 ರಿಂದ ಲಿಂಗಾಯತರನ್ನು ಕಡೆಗಣಿಸಲಾಗ್ತಿದೆ. ಲಿಂಗಾಯತರನ್ನು ಕಾಂಗ್ರೆಸ್ ಕಡೆಗಣಿಸಿದ್ದು ನಗ್ನ ಸತ್ಯ ಎಂದು ಶಾಸಕ ಬಿ.ಸಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಕಲ್ಯಾಣನಗರದ ನಿವಾಸದಲ್ಲಿ ಮಾತನಾಡಿ, ಮೊದಲಿಂದಲೂ ರಾಜ್ಯ ನಾಯಕರ ನಡವಳಿಕೆ ಬಗ್ಗೆ ಅಸಮಾಧಾನ ಇದೆ. ಪರಿಹಾರ ಸಿಗುವವರೆಗೂ ಕಾಯುತ್ತೇನೆ. ಸಚಿವ ಸ್ಥಾನ ಸಿಗುತ್ತೆ ಅನ್ನೋ ವಿಶ್ವಾಸವಿತ್ತು, ಸಿಗಲಿಲ್ಲ. ಮೂರು ಬಾರಿ ಶಾಸಕನಾಗಿದ್ದೇನೆ. ಹಿರಿಯನಿದ್ದೇನೆ. ಸಿದ್ದರಾಮಯ್ಯ ಸಿಎಂ ಆಗ್ಬೇಕು ಅನ್ನೋದು ರಾಜ್ಯದ ಜನತೆಯ ಆಶಯವಾಗಿದೆ. ಪ್ರಮಾಣಿಕ ಹಾಗೂ ದಕ್ಷ ರಾಜಕಾರಣಿ ಅವರು ಎಂದರು.
ಜೆ ಹೆಚ್ ಪಟೇಲ್, ಎಸ್ ಆರ್ ಬೊಮ್ಮಾಯಿ, ವೀರೇಂದ್ರ ಪಾಟೀಲ್, ನಿಜಲಿಂಗಪ್ಪರನ್ನು ಕಡೆಗಣಿಸಿದ್ದು, ಅವರಿಗೆ ಅಧಿಕಾರ ತಪ್ಪಿಸಲಾಗಿದೆ. ಉತ್ತರ ಮತ್ತು ಹೈದ್ರಾಬಾದ್ ಕರ್ನಾಟಕದಲ್ಲಿ ಒಂದು ಸ್ಥಾನವನ್ನೂ ಕಾಂಗ್ರೆಸ್ ಗೆದ್ದಿಲ್ಲ. ರಾಜಕೀಯವಾಗಿ ನಾನೇನೂ ಸನ್ಯಾಸಿಯಲ್ಲ. ಇವತ್ತು ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ಗೆ ಒಂದೇ ಒಂದು ಸೀಟು ಸಿಕ್ಕಿಲ್ಲ. ಅಲ್ಲಿಯ ಭಾಗದ ಜನರಿಗೆ ಅನ್ಯಾಯ ಆಗಿದೆ. ತಾರತಮ್ಯ ಧೋರಣೆ ಆಗಿದೆ. ಅಲ್ಲಿಯ ಭಾಗವನ್ನು ಕಡೆಗಣಿಸಿದ್ದೆ ಕಾಂಗ್ರೆಸ್ ಸೋಲಿಗೆ ಕಾರಣ ಎಂದರು.
ಬಿಜೆಪಿ ಅವರು ನಿಮ್ಮನ್ನ ಸಂಪರ್ಕ ಮಾಡಿದ್ರ ಎಂಬ ಪ್ರಶ್ನೆಗೆ ಉತ್ತರಿಸಿ, ಇಲ್ಲ ನನ್ನನ್ನು ಯಾವ ನಾಯಕರು ಸಂಪರ್ಕ ಮಾಡಿಲ್ಲ. ನಾನೇನು ರಾಜಕೀಯದಲ್ಲಿ ಸನ್ಯಾಸಿ ಅಲ್ಲ, ನೋಡೊಣ ಮುಂದೆ ಏನ್ ಆಗುತ್ತೆ ಅಂತ ಎಂದರು.
ಒಟ್ಟಿಗೆ ಚುನಾವಣೆ ಹಾಗೂ ಪ್ರಚಾರ ಮಾಡಿದರೂ ನಿರೀಕ್ಷೆಯಷ್ಟು ಸ್ಥಾನ ಗಳಿಸೋಕೆ ಸಾಧ್ಯವಾಗಿಲ್ಲ. ಬಿಜೆಪಿಯವರ ಗೆಲುವನ್ನ ಗೌರವಿಸುತ್ತೇನೆ. ಕಾಂಗ್ರೆಸ್ನಲ್ಲಿ ಹಿರಿಯ ನಾಯಕರ ಅಸಮಾಧಾನ ಕುರಿತು ಮಾತನಾಡುತ್ತೇನೆ. ಕಾಂಗ್ರೆಸ್ನಲ್ಲಿ ಸ್ಟೇಜ್ ಲೀಡರ್ಸ್ ಹೆಚ್ಚಾಗಿದ್ದಾರೆ. ಮಾಡುವವರನ್ನ ಗುರುತಿಸುತ್ತಿಲ್ಲ. ಕಾರ್ಯಕರ್ತರನ್ನ ಹಿಡಿದಿಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದರು.