ಬೆಂಗಳೂರು: ಡಾ. ಜಿ. ಪರಮೇಶ್ವರ್ ಮನೆ ಮೇಲೆ ಬೆಳಗ್ಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಮಾಜಿ ಡಿಸಿಎಂಗೆ ಸೇರಿದ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಆದಾಯ ತೆರಿಗೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಕಳೆದ ಹತ್ತು ವರ್ಷಗಳ ಐಟಿ ರಿಟರ್ನ್ಸ್ ಬಗ್ಗೆ ಗಮನ ಹರಿಸಿದ್ದ ಐಟಿ ಅಧಿಕಾರಿಗಳು ಇಂದು ಏಕಾಏಕಿ ದಾಳಿ ಮಾಡಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆ, ವೈದ್ಯಕೀಯ ಹಾಗೂ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಡೊನೇಷನ್ ಹೆಚ್ಚಾಗಿದ್ದರೂ ಪರಮೇಶ್ವರ್ ಅವರು ಆದಾಯ ತೋರಿಸದೆ ಐಟಿ ರಿಟರ್ನ್ಸ್ ಫೈಲ್ ಮಾಡಿಲ್ಲ ಎನ್ನುವ ಆರೋಪದ ಮೇಲೆ ಈ ದಾಳಿ ನಡೆದಿದೆ. ಈ ಕುರಿತು ಕಳೆದ ಮೂರು ತಿಂಗಳಿಂದ ಐಟಿ ಇಲಾಖೆ ನಿಗಾ ಇರಿಸಿತ್ತು ಎಂದು ಹೇಳಲಾಗ್ತಿದೆ.
ಆದಾಯ ತೆರಿಗೆಯಲ್ಲಿ ಗೋಲ್ ಮಾಲ್ ಆಗಿದ್ಯಾ ಅಥವಾ ಬೇರೆ ಬೇರೆ ಉದ್ಯಮದಲ್ಲೂ ಹಣ ತೊಡಗಿಸಿ ಪರಮೇಶ್ವರ್ ಅಕ್ರಮ ಆಸ್ತಿ ಸಂಪಾದಿಸಿದ್ದಾರಾ ಅನ್ನುವುದರ ಬಗ್ಗೆ ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪರಮೇಶ್ವರ್ ಅವರು ತಮ್ಮ ಪತ್ನಿ ಹಾಗೂ ಮಕ್ಕಳ ಹೆಸರಲ್ಲೂ ಕೋಟಿ ಕೋಟಿ ಆಸ್ತಿ ಮಾಡಿದ್ದು ಕೊರಟಗೆರೆ ಕೋ-ಆಪರೇಟಿವ್ ಬ್ಯಾಂಕ್ನಲ್ಲೂ ಕೋಟ್ಯಂತರ ರೂಪಾಯಿ ಹಣವನ್ನು ಹೂಡಿದ್ದಾರೆಂಬ ಗುಮಾನಿ ಇದೆ. ಈಗಾಗ್ಲೇ ಬೆಂಗಳೂರಿನ ಸದಾಶಿವನಗರದಲ್ಲಿರುವ ಪರಮೇಶ್ವರ್ ಮನೆಯಲ್ಲಿ ಮೊಕ್ಕಾಂ ಹೂಡಿರುವ 12 ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ತುಮಕೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ಹಿನ್ನೆಲೆಯಲ್ಲಿ ಸದ್ಯ ಅಲ್ಲಿ ಪರಮೇಶ್ವರ್ ಠಿಕಾಣಿ ಹೂಡಿದ್ದು, ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡ್ತಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ ಬೆಂಗಳೂರಿನ ಸದಾಶಿವನಗರದಲ್ಲಿ ಪತ್ನಿ ಕನ್ನಿಕಾ ಪರಮೇಶ್ವರ್ ಇದ್ದು ಮನೆಯಲ್ಲಿ ದಾಖಲೆಗಳ ಶೋಧ ಮುಂದುವರೆದಿದೆ.