ಬೆಂಗಳೂರು: ದೆಹಲಿಯ ನಿವಾಸದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಿಂದ ತಮ್ಮ ಹೆಸರು ಕೈಬಿಡುವಂತೆ ಕೋರಿ ಮಾಜಿ ಸಚಿವ, ಶಾಸಕ ಡಿ.ಕೆ.ಶಿವಕುಮಾರ್ ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಗೆ ವಾದ ಮಾಡಲು ಡಿಕೆಶಿ ಪರ ವಕೀಲರು ಸಮಾಯವಾಕಾಶ ಕೇಳಿದ್ದಾರೆ.
ಐಟಿ ದಾಳಿ ಪ್ರಕರಣದಿಂದ ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ವಜಾ ಮಾಡಿತ್ತು. ಈ ಆದೇಶ ಕಾನೂನು ಬಾಹಿರವಾಗಿದೆ. ಹೀಗಾಗಿ ಈ ಅರ್ಜಿಯನ್ನು ಪುನರ್ ಪರಿಶೀಲಿಸಬೇಕೆಂದು ಡಿಕೆಶಿ ಅವರು ಅರ್ಜಿ ಸಲ್ಲಿಸಿದ್ದರು.
ಆಗಸ್ಟ್ 2017ರಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರ ದೆಹಲಿ ನಿವಾಸದ ಮೇಲೆ ಹಾಗೂ ಕರ್ನಾಟಕದ ನಿವಾಸದ ಮೇಲೆ ಐಟಿ ದಾಳಿಯಾಗಿತ್ತು. ಪ್ರಕರಣದಿಂದ ತಮ್ಮ ಹೆಸರನ್ನು ಕೈಬಿಡುವಂತೆ ಡಿಕೆಶಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು ಬಳಿಕ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದ್ದರು. ಇದಾದ ನಂತರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.