ಬೆಂಗಳೂರು: ಮತಎಣಿಕೆ ಪೂರ್ವ ಸಮೀಕ್ಷೆಗಳು ಏನೇ ಇರಲಿ ಎರಡೂ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಜನರ ಅಭಿಪ್ರಾಯವೂ ಅದೇ ಆಗಿದೆ. ಎಲ್ಲಾ ಕಡೆ ಕಾಂಗ್ರೆಸ್ ಪರ ಅಲೆ ಇತ್ತು. ಜನ ಕಾಂಗ್ರೆಸ್ಗೆ ಮತ ಹಾಕಿದ್ದಾರೆ.
ಜನವಿರೋಧಿ ಹಾಗೂ ರೈತರ ವಿರೋಧಿ ಸರ್ಕಾರವನ್ನು ಕೊನೆಗಾಣಿಸಬೇಕು ಎಂಬ ಮನಸ್ಸು ಪ್ರತಿಯೊಬ್ಬರಿಗೂ ಇದೆ. ಅದು ಎರಡು ಕಡೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಜನ ಸಾಬೀತುಪಡಿಸಲಿದ್ದಾರೆ ಎಂದರು.
ಮಸ್ಕಿ ಬಸನಗೌಡ ತುರುವಿಹಾಳ್ ಕಾಂಗ್ರೆಸ್ ಸೇರ್ಪಡೆ ವಿಚಾರ ಮಾತನಾಡಿ, ಬಸವನಗೌಡ ಅವರು ಪಕ್ಷ ಸೇರುವ ಒಲವು ತೋರಿಸಿದ್ದಾರೆ. ಪಕ್ಷದ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಅಧಿಕೃತವಾಗಿ ಪಕ್ಷ ಸೇರ್ಪಡೆ ಇನ್ನೊಂದು ವಾರದಲ್ಲಿ ಆಗಲಿದೆ. ಬಸವಕಲ್ಯಾಣ ವಿಧಾನಸಭೆ ಕ್ಷೇತ್ರ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಇನ್ನೂ ಆಗಿಲ್ಲ. ಪಕ್ಷದ ಎಲ್ಲಾ ನಾಯಕರು ಒಟ್ಟಾಗಿ ಚರ್ಚಿಸಿ ಒಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಪಕ್ಷದ ರಾಜ್ಯ ನಾಯಕರು ಹೈಕಮಾಂಡ್ ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾನು ಕೂಡ ಬಸವಕಲ್ಯಾಣ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ನಾಯಕರ ಜೊತೆ ಚರ್ಚಿಸಿದ್ದೇನೆ. ಇನ್ನೂ ಒಂದೆರಡು ಸಭೆ ನಡೆಯಲಿದೆ ಜೊತೆಗೆ ಜಿಲ್ಲಾ ಮಟ್ಟದಲ್ಲಿಯೂ ಸಭೆ ನಡೆಸುತ್ತೇವೆ.
ನಮ್ಮ ಹಾಗೂ ಜನರ ಅಭಿಪ್ರಾಯ ಏನಿದೆ ಎಂಬುದನ್ನು ಸಂಗ್ರಹಿಸಿ ಪಕ್ಷದ ಮುಖ್ಯಸ್ಥರಿಗೆ ಸಲ್ಲಿಸುತ್ತೇವೆ. ಮೃತ ಶಾಸಕ ನಾರಾಯಣರಾವ್ ಕುಟುಂಬ ಸದಸ್ಯರು ಆಕಾಂಕ್ಷಿಗಳಾಗಿದ್ದಾರೆ ಹಾಗೂ ಇದರ ಜೊತೆ ಬೇರೆ ಆಕಾಂಕ್ಷಿಗಳೂ ಇದ್ದಾರೆ ಎಂದರು.
ರಾಮದುರ್ಗದಲ್ಲಿ ಬಸವ ಪುತ್ಥಳಿ ಹಾನಿ ವಿಚಾರ ಮಾತನಾಡಿ, ವೈಯಕ್ತಿಕವಾಗಿ ಹಾಗೂ ಪಕ್ಷದ ವತಿಯಿಂದ ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಶರಣರ ತತ್ವ ಯಾವಾಗಲೂ ಪ್ರಸ್ತುತವೇ.. ಸರ್ಕಾರ ಇದನ್ನು ಪತ್ತೆಹಚ್ಚಬೇಕು. ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಮಾಜಿ ಮೇಯರ್ ಸಂಪತ್ ರಾಜ್ ಕಣ್ಮರೆ ವಿಚಾರ ಮಾತನಾಡಿ, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತಪ್ಪು ಮಾಡಿದವರು ಯಾವತ್ತಿದ್ದರೂ ಕಾನೂನಿಗೆ ತಲೆಬಾಗಲೇಬೇಕು. ರಾಜ್ಯ ಹಾಗೂ ದೇಶದಲ್ಲಿ ಎಲ್ಲಾ ವಿಧದ ತನಿಖಾ ಸಂಸ್ಥೆಗಳ ದುರ್ಬಳಕೆ ಆಗುತ್ತಿರುವುದನ್ನು ಗಮನಿಸುತ್ತಿದ್ದೇವೆ.
ಇಂತಹ ಪರಿಸ್ಥಿತಿಯಲ್ಲಿ ನಮಗೆ ಈ ನೆಲದ ಕಾನೂನಿನ ಮೇಲೆ ಗೌರವವಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಮೇಲೆ ಯಾರು ಬೆಂಕಿ ಹಚ್ಚಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸುತ್ತೇವೆ. ಕಾಂಗ್ರೆಸ್ ಪಕ್ಷ ಯಾರಿಗೂ ಸಹಕಾರ ನೀಡುತ್ತಿಲ್ಲ ಎಂದರು.