ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆ ಎನ್ನುವುದು ಇಲ್ಲವೇ ಇಲ್ಲ. ರಾಜ್ಯವೂ ಸೇರಿದಂತೆ ದೇಶದಲ್ಲಿ ಎಐಸಿಸಿ ಅದ್ಯಕ್ಷರಾದ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಮತ್ತು ಜಾತ್ಯಾತೀತ ಶಕ್ತಿಗಳ ಪರವಾದ ಅಲೆಯಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೀದರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಈಶ್ವರ್ ಖಂಡ್ರೆ ಅವರು ಬೆಂಗಳೂರಲ್ಲಿ ಈ ಟಿವಿ ಭಾರತ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿಯನ್ನ ಮಣಿಸಿ 20 ರಿಂದ 24 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರಕ್ಕೆ ಯಾವುದೇ ಅಪಾಯವಿಲ್ಲ, ಸರಕಾರ ಸುಭದ್ರವಾಗಿರುತ್ತದೆ. ಕುಮಾರಸ್ವಾಮಿ ಸರಕಾರ ಪತನವಾಗುತ್ತದೆ ಎನ್ನುವುದು ಬಿಜೆಪಿಯವರ ಹಗಲುಗನಸು ಎಂದು ಹೇಳಿದರು.
ಡಾ. ಉಮೇಶ ಜಾಧವ್ ಅವರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಮೂಲಕ ಅವರ ರಾಜಕೀಯ ಭವಿಷ್ಯವನ್ನು ಅವರೇ ಹಾಳು ಮಾಡಿಕೊಂಡಿದ್ದಾರೆ. ಕಲ್ಬುರ್ಗಿಯಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಎದುರು ಸೋತ ಬಳಿಕ ಡಾ. ಉಮೇಶ ಜಾಧವ್ ಪಶ್ಚಾತ್ತಾಪ ಪಡುತ್ತಾರೆಂದರು.
ಬೀದರ್ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಸೋಲಿಸಿ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಬೀದರ್ನ್ನು ಮರಳಿ ಪಡೆಯುತ್ತೇನೆ. ಈ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸುತ್ತೇವೆ. ತಮಗೆ ಟಿಕೆಟ್ ನೀಡಿದ ಬಗ್ಗೆ ಪಕ್ಷದಲ್ಲಿ ಯಾರಿಗೂ ಬೇಸರ ಇಲ್ಲ. ಎಲ್ಲರಿಗೂ ಸಂತಸವಿದೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಸಹ ನನ್ನ ಸ್ಪರ್ಧೆ ಬಗ್ಗೆ ಸಂತಸ ಪಟ್ಟಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.
ಬೀದರ್ ಕ್ಷೇತ್ರ ಗೆಲ್ಲುವುದರ ಜತೆಗೆ ಕಲಬುರಗಿಯಲ್ಲಿ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆಯವರನ್ನೂ ಸಹ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಖಂಡ್ರೆ ತಿಳಿಸಿದರು. ಪಕ್ಷದಲ್ಲಿ ಬೇರೆ ಬೇರೆ ಜವಾಬ್ದಾರಿಗಳನ್ನು ನಿರ್ವಹಿಸಿ ಬೆಳೆಯಬೇಕೆನ್ನುವ ಆಸೆ ಇದೆ. ಆದರೆ ನನಗೆ ಬೇರೆಯವರ ಅವಕಾಶ ಕಸಿದುಕೊಂಡು ಮೇಲೆ ಬರುವ ದುರುದ್ದೇಶ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.