ಬೆಂಗಳೂರು: ವೀರಶೈವ-ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಒಳಗೊಂಡಂತೆ ಕೇಂದ್ರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿತು.
ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದಲೂ ಶಿಫಾರಸು ಹೋಗಬೇಕು : ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಪ್ರತಿನಿಧಿಗಳು, ಮುಖಂಡರು ಪಾಲ್ಗೊಂಡಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಮಾತನಾಡಿ, ಸಮುದಾಯದ ಪ್ರಮುಖ ಮುಖಂಡರೇ ಎಲ್ಲರೂ ಸೇರಿ ಎಲ್ಲೆಡೆ ಹೋರಾಟ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಕೇಂದ್ರ ಸರ್ಕಾರ ಒಬಿಸಿ ಪಟ್ಟಿಯಲ್ಲಿ ನಮ್ಮನ್ನು ಸೇರಿಸಬೇಕು ಎಂಬ ಬೇಡಿಕೆ ಬಹು ದಿನಗಳಿಂದಲೂ ಇತ್ತು. ಇಂದು ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಈ ಒಂದು ಶಿಫಾರಸು ಹೋಗಬೇಕು. ಕಳೆದ ಮೂರು ದಶಕಗಳಿಂದಲೂ ನಮ್ಮ ಹೋರಾಟ ನಡೆಯುತ್ತಲೇ ಇದೆ. ಈ ಮೀಸಲಾತಿಯಿಂದ ವಂಚಿತರಾಗಿ ನಮ್ಮ ಸಮುದಾಯದ ಯುವಕ-ಯುವತಿಯರು ಹಲವು ಕ್ಷೇತ್ರಗಳಲ್ಲಿ ಉದ್ಯೋಗ ವಂಚಿತರಾಗಿದ್ದಾರೆ. ದೇಶದ ಸಾಂಸ್ಕೃತಿಕ ಇತಿಹಾಸಕ್ಕೆ ನಮ್ಮ ಸಮುದಾಯದ ಮಠಮಾನ್ಯಗಳ ಕೊಡುಗೆ ಸಾಕಷ್ಟಿದೆ ಎಂದು ಹೇಳಿದರು.
ಕೆಲವರಿಗೆ ಮಾತ್ರ ಅನುಕೂಲ: ಪ್ರಸ್ತುತ ರಾಜ್ಯದಲ್ಲಿ ಲಿಂಗಾಯತ ವೀರಶೈವರಿಗೆ ಕ್ಯಾಟಗರಿ 3ಬಿ ನಲ್ಲಿ ಶೇ. ಐದರಷ್ಟು ಮೀಸಲಾತಿ ಇದೆ. ರಾಜ್ಯದಲ್ಲಿ ಇರುವ ಮೀಸಲಾತಿ ಪಟ್ಟಿ ಕೇಂದ್ರದಲ್ಲಿ ಇಲ್ಲ. ವೀರಶೈವ ಲಿಂಗಾಯತ ಸಮುದಾಯದ ಒಂದೆರಡು ಪಂಗಡಗಳಿಗೆ ಮಾತ್ರ ಮೀಸಲಾತಿಯ ಅನುಕೂಲ ಸಿಗುತ್ತಿದೆ. ಉಳಿದಂತೆ ಶೇಕಡ 80 ರಷ್ಟು ಒಳಪಂಗಡಗಳು ಕೇಂದ್ರದ ಒಬಿಸಿ ಪಟ್ಟಿಯಿಂದ ಇಂದು ವಂಚಿತವಾಗಿವೆ. ಕೇಂದ್ರದ ಹಲವು ನೇಮಕಾತಿಗಳಲ್ಲಿ ನಮಗೆ ಅನ್ಯಾಯ ಆಗುತ್ತಿದೆ ಎಂದು ದೂರಿದರು.
ಚಿನ್ನಪ್ಪ ರೆಡ್ಡಿ ಆಯೋಗ : ರಾಜ್ಯದಲ್ಲಿ ಮೂರು ಹಿಂದುಳಿದ ವರ್ಗಗಳ ಆಯೋಗಗಳು ಆಗಿವೆ. ಇತ್ತೀಚೆಗೆ ಹೊಸದಾಗಿ ಚಿನ್ನಪ್ಪ ರೆಡ್ಡಿ ಆಯೋಗ ರಚನೆ ಆಗಿದೆ. ಇದರಲ್ಲಿ ವೀರಶೈವ ಲಿಂಗಾಯಿತರ ಪರಿಸ್ಥಿತಿ ಶೈಕ್ಷಣಿಕ ಸ್ಥಿತಿಗತಿ ಬದುಕು ಸೇರಿದಂತೆ ಹಲವು ವಿಚಾರಗಳ ದಾಖಲೆ ನೀಡಲಾಗಿದೆ. ಈ ದಾಖಲೆ ನಮಗೆ ಒಬಿಸಿ ಮೀಸಲಾತಿಯಲ್ಲಿ ಅವಕಾಶ ಸಿಗಬೇಕು. ನಮಗಿಂತಲೂ ಸಬಲರಾಗಿರುವ ಹಾಗೂ ಆರ್ಥಿಕವಾಗಿ ಸ್ಥಿತಿವಂತರಾಗಿರುವವರು ಕೇಂದ್ರದ ಒಬಿಸಿ ಪಟ್ಟಿಯಲ್ಲಿದ್ದಾರೆ. ನಾವು ಯಾರಿಗೂ ಲಭಿಸಿರುವ ಮೀಸಲಾತಿಯನ್ನು ಕಿತ್ತು ನಮಗೆ ಕೊಡಿ ಎಂದು ಕೇಳುತ್ತಿಲ್ಲ. ನಮಗೆ ನಮ್ಮದೇ ಆದ ಸಾಮಾಜಿಕ ನ್ಯಾಯವನ್ನು ಒದಗಿಸಿ ಕೊಡಿ ಎಂದು ಕೇಳುತ್ತಿದ್ದೇವೆ ಎಂದು ಆಗ್ರಹಿಸಿದರು.
ಹೋರಾಟಕ್ಕೆ ಅವಕಾಶ ನೀಡಬೇಡಿ: ವಿಭೂತಿಪುರ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಹೋರಾಟ ಹಲವು ವರ್ಷ ಹಿಂದೆ ಆರಂಭವಾಗಿದೆ. ಇಂದು ನಡೆಸುತ್ತಿರುವ ಹೋರಾಟವನ್ನೇ ಮೀಸಲಾತಿಗಾಗಿ 1946ರಲ್ಲಿ ನಡೆಸಿದರೆ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಉಪ ಪಂಗಡಗಳು ಸೇರ್ಪಡೆ ಆಗಿಬಿಟ್ಟಿರುತ್ತಿದ್ದವು. ಚನ್ನಪ್ಪ ರೆಡ್ಡಿ ಆಯೋಗದ ಪ್ರಕಾರ ಮೀಸಲಾತಿ ಪಟ್ಟಿಗೆ ಸೇರಿಸುವಾಗ ಒಂದಿಷ್ಟು ಮಾನದಂಡವನ್ನು ಸೂಚಿಸಿದ್ದಾರೆ. ಶೇಕಡ 11.6ರಷ್ಟು ಮಂದಿ ಸಮುದಾಯದ ನಾಯಕರು ನಿವೇಶನ, ಜಮೀನು ರಹಿತರಾಗಿದ್ದಾರೆ. ಒಟ್ಟಾರೆ ವಿವಿಧ ಸಮುದಾಯಗಳ ಜೊತೆ ನಮಗೂ ಈ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗುವ ಅರ್ಹತೆ ಇದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಇನ್ನಷ್ಟು ಹೋರಾಟಕ್ಕೆ ಅವಕಾಶ ನೀಡದೆ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಮುಂದಾಗಬೇಕು ಎಂದು ಹೇಳಿದರು.
ಇದನ್ನೂ ಓದಿ: ನಮ್ಮದು ರಾಷ್ಟ್ರೀಯ ಪಕ್ಷ, ಬೇಧ ಭಾವ ಮಾಡುವ ಅವಶ್ಯಕತೆ ಇಲ್ಲ: ಸಿಎಂ ಬೊಮ್ಮಾಯಿ