ಬೆಂಗಳೂರು : ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ತಕ್ಷಣ 5 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಒತ್ತಡ ಹೇರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಈ ಬಾರಿಯೂ ನೆರೆ ಹಾವಳಿಗೆ ತುತ್ತಾಗಿ 680 ಹಳ್ಳಿಗಳು, 56 ತಾಲೂಕುಗಳು ತತ್ತರಿಸಿವೆ. 80 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. 3500 ಕಿ.ಮೀ. ರಸ್ತೆ ಹಾಳಾಗಿ, 395 ಕಟ್ಟಡ, 250 ಸೇತುವೆಗಳು ಪ್ರವಾಹಕ್ಕೆ ಕುಸಿದಿವೆ.
ಬಿಜೆಪಿಯವರು ನಮ್ಮದು ಡಬಲ್ ಎಂಜಿನ್ ಸರ್ಕಾರ ಎಂದು ಹೇಳುತ್ತಾರೆ. ಇಲ್ಲಿಯವರೆಗೆ ಎಷ್ಟು ಮನೆ ಕಟ್ಟಿದ್ದಾರೆ, ಎಷ್ಟು ರಸ್ತೆ, ಸೇತುವೆಗಳನ್ನ ಸರಿಪಡಿಸಿದ್ದಾರೆ? ಕಳೆದ ವರ್ಷ ಸಹ ನೆರೆ ಬಂದಾಗ ಕನಿಷ್ಠ ಸೌಜನ್ಯಕ್ಕೂ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿರಲಿಲ್ಲ ಎಂದು ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯದ 25 ಸಂಸದರು ದೆಹಲಿಯ ಚಾಂದಿನಿಚೌಕ್ನಲ್ಲಿ ಚಾಟ್ ತಿನ್ನೋಕೆ ಇದ್ದಾರೆ ಅಷ್ಟೆ. ಅವರು ಪರಿಹಾರ ಕೇಳೋಕೆ ಹೋಗುತ್ತಿಲ್ಲ.ಸಚಿವ ಆರ್.ಅಶೋಕ್ ಹತ್ತು ಸಾವಿರ ಕೋಟಿ ನಷ್ಟ ಅಂದಿದ್ದಾರೆ. ಆದರೆ ಸಿಎಂ ಇನ್ನೂ ಸಮೀಕ್ಷೆ ಮಾಡಬೇಕು ಅಂತಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ ಕೂಡ ಬೊಕ್ಕಸದಲ್ಲಿ ಹಣ ಇಲ್ಲ ಅಂತಾರೆ. ಅಂದರೆ ಇವರಲ್ಲಿಯೇ ಸಮನ್ವಯದ ಕೊರತೆ ಇದೆ ಎಂದು ಟೀಕಿಸಿದರು.