ಬೆಂಗಳೂರು: ಬಾಡಿಗೆ ಕಾರು ಪಡೆದು ಸ್ನೇಹಿತರೊಂದಿಗೆ ಬನ್ನೇರುಘಟ್ಟ ರಾಷ್ಟ್ರೀಯ ಪಾರ್ಕ್ಗೆ ತೆರಳುವಾಗ ತಪಾಸಣೆಗಾಗಿ ಅಡ್ಡಗಟ್ಟಿದ ಮೈಕೊ ಲೇಔಟ್ ಸಂಚಾರ ಪೊಲೀಸರು, ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಐಐಎಸ್ಸಿ ವಿಜ್ಞಾನಿ ಆರೋಪಿಸಿದ್ದಾರೆ.
![complaint letter](https://etvbharatimages.akamaized.net/etvbharat/prod-images/4154814_bng.jpg)
ಭಾರತೀಯ ವಿಜ್ಞಾನ ಸಂಸ್ಥೆಯ ಯುವ ವಿಜ್ಞಾನಿ ಅವನೀಶ್ ಪ್ರತಾಪ್ ಸಿಂಗ್ ಎಂಬುವರು ಕಳೆದ ಭಾನುವಾರ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ಗೆ ಕಂಪೆನಿಯೊಂದರ ಕಾರು ಬಾಡಿಗೆ ಪಡೆದು ಸ್ನೇಹಿತರೊಂದಿಗೆ ತೆರಳಿದ್ದರು. ಬನ್ನೇರುಘಟ್ಟ ರಸ್ತೆಯ ಗೋಪಾಲನ್ ಮಾಲ್ ಬಳಿ ಮೈಕೊ ಲೇಔಟ್ ಸಂಚಾರ ಪೊಲೀಸರು ಕಾರನ್ನು ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ.
ಸಮವಸ್ತ್ರ ಧರಿಸದೆ ವಾಹನ ಚಾಲನೆ ಮಾಡಿದ್ದೀರಾ. ಹೀಗಾಗಿ 100 ರೂ.ದಂಡ ಪಾವತಿಸಿ ಎಂದು ಅವನೀಶ್ ಸಿಂಗ್ಗೆ ಪೊಲೀಸರು ಸೂಚಿಸಿದ್ದರು ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ನಾನು ಕಾರನ್ನು ಬಾಡಿಗೆ ಪಡೆದು ವಾಹನ ಚಾಲನೆ ಮಾಡುತ್ತಿದ್ದು, ಸಮವಸ್ತ್ರ ಧರಿಸಿಲ್ಲ. ಅಲ್ಲದೆ ದಂಡ ವಿಧಿಸಲು ಅವಕಾಶವಿಲ್ಲ ಎಂದು ಹೇಳಿದೆ. ಆದರೆ, ಪೊಲೀಸರು ದಂಡ ಕಟ್ಟಲೇಬೇಕೆಂದು ಪಟ್ಟು ಹಿಡಿದರು. ಈ ವೇಳೆ ಮಾತಿನ ಚಕಮಕಿ ನಡೆದು ಪೊಲೀಸರು ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಮೈಕೋ ಲೇಔಟ್ ಠಾಣೆಗೆ ನೀಡಿರುವ ದೂರಿನಲ್ಲಿ ಅವನೀಶ್ ತಿಳಿಸಿದ್ದಾರೆ.