ಬೆಂಗಳೂರು : ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೊರೊನಾ ಮೂರನೇ ಅಲೆ ಆತಂಕದ ಹಿನ್ನೆಲೆಯಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗ್ತಿದೆ.
ಈ ಚುನಾವಣೆಯನ್ನು ಡಿಸೆಂಬರ್ ವರೆಗೂ ಮುಂದೂಡಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರ ಶಿಫಾರಸು ಸಲ್ಲಿಸಿದೆ. ಕೊರೊನಾ ಮೂರನೇ ಅಲೆ ಜೊತೆಗೆ ಡೆಲ್ಟಾ ಪ್ಲಸ್ ತೀವ್ರತೆ ಕಂಡು ಬರುತ್ತಿವೆ. ಗಡಿ ಜಿಲ್ಲೆಗಳಲ್ಲಿ ಸರ್ಕಾರ ವಾರಾಂತ್ಯದ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದ್ದ ಹಲವು ಶಿಕ್ಷಕರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಇದು ಸರ್ಕಾರದ ಇಮೇಜಿಗೆ ಧಕ್ಕೆ ತಂದಿತ್ತು. ಹಾಗಾಗಿ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸಿದರೆ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಚುನಾವಣೆ ಮುಂದೂಡುವುದು ಸೂಕ್ತ ಎಂಬ ನಿಲುವಿಗೆ ಸರ್ಕಾರ ಬಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸರ್ಕಾರಕ್ಕೆ ವ್ಯತಿರಿಕ್ತ ಪರಿಣಾಮ :
ಇದಲ್ಲದೆ ಕೊರೊನಾ ಎರಡನೇ ಅಲೆ ನಿರ್ವಹಣೆಯಲ್ಲಿ ಸರ್ಕಾರ ಎಡವಟ್ಟು ಮಾಡಿಕೊಂಡಿತ್ತು. ಆಕ್ಸಿಜನ್ ಹಾಗೂ ಔಷಧ ಕೊರತೆಯಿಂದಾಗಿ ಬಹಳಷ್ಟು ಜನ ಸಾವನ್ನಪ್ಪಿದರು. ಹಾಗಾಗಿ, ಕೊರೊನಾ ಎರಡನೇ ಅಲೆ ನಿರ್ವಹಣೆ ಬಗ್ಗೆ ಜನರಲ್ಲಿ ಸಮಾಧಾನವಿಲ್ಲ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸಿದರೆ ಸರ್ಕಾರದ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಬಹುದೆಂಬ ಭಯವೂ ಒಳಗೊಳಗೇ ಬಿಜೆಪಿ ಸರ್ಕಾರಕ್ಕೆ ಇದೆ. ಇದು ಒಂದು ಕಾರಣ ಚುನಾವಣೆ ಮುಂದೂಡಲು ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಸಂಪುಟ ರಚನೆ ವಿಚಾರದಲ್ಲಿ ಸಣ್ಣ ಪುಟ್ಟ ಅಸಮಾಧಾನ, ಗೊಂದಲಗಳು ಇನ್ನೂ ಜೀವಂತವಾಗಿವೆ. ಇದು ಸಹ ಕೆಲವೆಡೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಆತಂಕವೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಎದುರಾಗಲಿದೆ ಪರಿಷತ್ ಚುನಾವಣೆ :
ವಿಧಾನಪರಿಷತ್ನ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಡಿಸೆಂಬರ್ ಒಳಗೆ ಚುನಾವಣೆ ನಡೆಯಬೇಕಿದ್ದು, ಈ ಪರಿಷತ್ ಚುನಾವಣೆಗೆ ತಾಲೂಕು ಪಂಚಾಯಿತಿಯ 3,285 ಹಾಗೂ ಜಿಲ್ಲಾ ಪಂಚಾಯಿತಿಯ 1191 ಸದಸ್ಯರು ಮತದಾರರಾಗಿದ್ದಾರೆ. ಚುನಾವಣೆಯನ್ನು ಆರು ತಿಂಗಳು ಮುಂದೂಡಿದಲ್ಲಿ ಈ ಸಂಸ್ಥೆಗಳನ್ನು ಕೈಬಿಟ್ಟು ಪರಿಷತ್ ಚುನಾವಣೆ ನಡೆಸಬೇಕಾಗುತ್ತದೆ. ಇದಕ್ಕೆ ಮೂರೂ ಪಕ್ಷದಲ್ಲಿ ವಿರೋಧವಿದೆ. ಹಾಗಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಗೊಂದಲಕ್ಕೆ ಸಿಲುಕಿದೆ. ವಿಧಾನ ಪರಿಷತ್ತಿನ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ನಡೆಸಲಿದೆ.
75 ಸದಸ್ಯ ಬಲವುಳ್ಳ ಪರಿಷತ್ ನಲ್ಲಿ 25 ಸ್ಥಾನಗಳನ್ನು ಖಾಲಿ ಇಡುವ ಸಾಧ್ಯತೆಗಳು ತೀರಾ ಕಡಿಮೆ. ಹೀಗಾಗಿ, ವಿಧಾನ ಪರಿಷತ್ ಚುನಾವಣೆ ನಿಗದಿತ ಕಾಲಾವಧಿಗೆ ನಡೆಯುವುದು ಬಹುತೇಕ ನಿಶ್ಚಿತವಾಗಿದೆ. ಆದರೆ, ಕೊರೊನಾ ತೀವ್ರತೆ, ಸರ್ಕಾರದ ಚುನಾವಣೆ ಮುಂದೂಡುವ ಶಿಫಾರಸಿನ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಸುವ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.
ರಾಜಕೀಯ ನಾಯಕರಿಗೆ ನಿರಾಸೆ :
ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ಪೂರ್ವಭಾವಿ ಸಿದ್ಧತೆ ನಡೆಸಿದೆ. ಈಗಾಗಲೇ ಕ್ಷೇತ್ರವಾರು ಮೀಸಲು ಪಟ್ಟಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಿ ಪರಿಶೀಲಿಸುತ್ತಿದೆ. ಮತ್ತೊಂದೆಡೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವ ತಾಲೀಮು ಆರಂಭಿಸಿದ್ದವು. ಜೆಡಿಎಸ್ ಒಂದು ಹೆಜ್ಜೆ ಮುಂದೆ ಹೋಗಿ ಜಿಲ್ಲಾವಾರು ಸಭೆಗಳನ್ನು ಮಾಡಿತ್ತು. ಆದರೆ, ಇದೀಗ ಸರ್ಕಾರದ ಪ್ರಸ್ತಾವನೆಯಿಂದ ಚುನಾವಣಾ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ ಎಂದು ಹೇಳಲಾಗುತ್ತಿದೆ.