ಬೆಂಗಳೂರು: ಆರ್ ಆರ್ ನಗರ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಬಿರುಸು ಪಡೆದಿರುವ ಮಧ್ಯೆ ಬಿಜೆಪಿ ಅಭ್ಯರ್ಥಿಗೆ ಅಚ್ಚರಿ ಮೂಡಿಸುವ ವಿಚಾರವೊಂದು ಬೆಳಕಿಗೆ ಬಂದಿದೆ. ಆದರೆ ರಾಜ್ಯ ಬಿಜೆಪಿ ಕಾರ್ಯಾಲಯ ಮಾತ್ರ ಮುನಿರತ್ನ ಅವರಿಂದ ಒಂದು ಹಂತದ ಅಂತರ ಕಾಯ್ದುಕೊಂಡಿದೆ ಎನ್ನಲಾಗ್ತಿದೆ.
ಉಪ ಚುನಾವಣೆ ಘೋಷಣೆಯಾಗಿ ಅಭ್ಯರ್ಥಿ ಆಯ್ಕೆಯಾದ ನಂತರ ಬಿಜೆಪಿಯಿಂದ ಭರಾಟೆಯ ಪ್ರಚಾರ ನಡೆಯುತ್ತಿದೆ. ಆದರೆ ಬಿಜೆಪಿ ಕಚೇರಿ ಮಾತ್ರ ಮುನಿರತ್ನ ವಿಚಾರಕ್ಕೆ ಈವರೆಗೂ ತಲೆಹಾಕಿಲ್ಲ. ಸಾಮಾನ್ಯವಾಗಿ ರಿಜಾಯ್ಸ್ ಹೋಟೆಲ್ನಲ್ಲಿ ಚುನಾವಣಾ ಮಾಧ್ಯಮ ಕೇಂದ್ರ ತೆರೆಯುತ್ತದೆ. ಆದರೆ ಈ ಬಾರಿ ಒಂದೇ ಒಂದು ಬಾರಿ ಮಾತ್ರ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದೆ. ಮಲ್ಲೇಶ್ವರಂನಲ್ಲಿಯೇ ಬಿಜೆಪಿ ನಗರ ಕಚೇರಿ ಇದ್ದು, ಸದ್ಯ ಆ ಕಚೇರಿಯಲ್ಲಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗೋಷ್ಟಿಗಳನ್ನು ನಡೆಸಲಾಗುತ್ತಿದೆ.
ಆದರೆ ಪ್ರಮುಖವಾಗಿ ಬಿಜೆಪಿ ರಾಜ್ಯ ಘಟಕದಿಂದ ಮುನಿರತ್ನ ಪರ ಯಾವುದೇ ಮಾಧ್ಯಮಗೋಷ್ಟಿಯ ಆಹ್ವಾನ ಬರುತ್ತಿಲ್ಲ. ಪ್ರಚಾರ ಕಾರ್ಯಗಳು, ಎಲ್ಲೆಲ್ಲಿ ಚುನಾವಣಾ ಪ್ರಚಾರ ನಡೆಯಲಿದೆ, ಯಾವ-ಯಾವ ಮುಖಂಡರು ಭಾಗಿಯಾಗಲಿದ್ದಾರೆ ಎನ್ನುವ ಯಾವ ಮಾಹಿತಿಯನ್ನೂ ಕೂಡ ಬಿಜೆಪಿ ಕಚೇರಿಯಿಂದ ನೀಡುತ್ತಿಲ್ಲ. ದಕ್ಷಿಣ ಭಾರತದ ನಟಿ ಖುಷ್ಬೂ ಅವರು ಮುನಿರತ್ನ ಪರ ಪ್ರಚಾರ ನಡೆಸಲು ಆಗಮಿಸುವ ಮಾಹಿತಿಯನ್ನೂ ಕೂಡ ಬಿಜೆಪಿ ಕಚೇರಿ ನೀಡದೇ ಇರುವುದು ಮುನಿರತ್ನ ಅವರಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆಯಾ ಎನ್ನುವ ಅನುಮಾನಕ್ಕೆ ಪುಷ್ಟಿ ನೀಡಿದೆ.
ಬಿಜೆಪಿಗೆ ಪ್ರಬಲ ಪೈಪೋಟಿ ನೀಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರ ಚುನಾವಣಾ ಪ್ರಚಾರ ಸಭೆಗಳು, ಱಲಿಗಳನ್ನು ಕೆಪಿಸಿಸಿ ತನ್ನ ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ ಮಾಡುತ್ತಿದೆ. ಸೋಷಿಯಲ್ ಮೀಡಿಯಾವನ್ನು ಸಮರ್ಥವಾಗಿ ಬಳಸಿಕೊಂಡು ಪೂರ್ಣ ಪ್ರಮಾಣದ ಪ್ರಚಾರವನ್ನು ನಡೆಸುತ್ತಿದೆ. ಆದರೆ ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ಸಾಕಷ್ಟು ಮುಂದಿರುವ ಹಾಗು ಪರಿಣಿತಿ ಹೊಂದಿರುವ ಬಿಜೆಪಿ ಮಾತ್ರ ಮುನಿರತ್ನ ಪ್ರಚಾರ ಸಭೆಗಳ ನೇರ ಪ್ರಸಾರ ಮಾಡುತ್ತಿಲ್ಲ. ಪ್ರಚಾರದ ವಿಷಯವನ್ನು ಫೋಟೋ ಕ್ಯಾಪ್ಷನ್ಗೆ ಸೀಮಿತಗೊಳಿಸಿದೆ.
ಹಿಂದಿನ ಚುನಾವಣೆಗಳಲ್ಲಿ ಸಾಮಾಜಿಕ ಜಾಲತಾಣ ಹಾಗೂ ಬಿಜೆಪಿ ಕಾರ್ಯಾಲಯ ಹೆಚ್ಚಿನ ಜವಾಬ್ದಾರಿ ವಹಿಸುತ್ತಿತ್ತು. ಅಭ್ಯರ್ಥಿಗಳ ಪ್ರಚಾರ ಸ್ಥಳ, ಯಾವ ಸಮಯಕ್ಕೆ ಎಲ್ಲಿ ಪ್ರಚಾರ, ಯಾರು ಭಾಗಿ ಎನ್ನುವ ಮಾಹಿತಿ ಬಗ್ಗೆ ಮಾಧ್ಯಮಗೋಷ್ಟಿ ವಿವರ ಎಲ್ಲವನ್ನೂ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿತ್ತು. ಆದರೆ ಈ ಬಾರಿ ಆ ರೀತಿಯ ಯಾವ ಚಟುವಟಿಕೆಯೂ ಬಿಜೆಪಿ ಕಾರ್ಯಾಲಯದಿಂದ ನಡೆಯುತ್ತಿಲ್ಲ.
ಬಿಜೆಪಿ ಕಚೇರಿ ಬದಲು ಮುನಿರತ್ನ ನಿವಾಸವೇ ಚುನಾವಣಾ ಪ್ರಚಾರ ಕಚೇರಿಯಾಗಿದೆ. ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ಚಟುವಟಿಕೆಗಳು, ಕಾರ್ಯತಂತ್ರಗಳು ವೈಯಾಲಿಕಾವಲ್ ನಿವಾಸದಲ್ಲೇ ನಡೆಯುತ್ತಿವೆ. ನಟಿ ಖುಷ್ಬೂ ಕೂಡ ಬಿಜೆಪಿ ಕಚೇರಿಗಾಗಲಿ ನಾಯಕರ ನಿವಾಸಗಳಿಗಾಗಲಿ ಆಗಮಿಸದೆ ನೇರವಾಗಿ ಮುನಿರತ್ನ ನಿವಾಸಕ್ಕೆ ಆಗಮಿಸಿ ಮತಪ್ರಚಾರ ನಡೆಸಿದರು. ಇವೆಲ್ಲವನ್ನೂ ಗಮನಿಸಿದರೆ ಮುನಿರತ್ನ ಅವರಿಂದ ಬಿಜೆಪಿ ರಾಜ್ಯ ಘಟಕ ಅಂತರ ಕಾಯ್ದುಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಡಿಕೆಶಿ ಮೊಕ್ಕಾಂ - ಕಟೀಲ್ ಗೆಸ್ಟ್ ಅಪಿಯರೆನ್ಸ್:
ಆರ್ ಆರ್ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೊಕ್ಕಾಂ ಹೂಡಿ ನಿರಂತರವಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತ್ರ ಅತಿಥಿ ಪ್ರಚಾರಕರಂತೆ ಆಗೊಮ್ಮೆ ಈಗೊಮ್ಮೆ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿದ್ದಾರೆ.
ಅಶೋಕ್ ಸಾಥ್:
ಇನ್ನು ಮುನಿರತ್ನ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಆರ್. ಅಶೋಕ್ ಕೂಡ ಮುಂದಾಳತ್ವ ವಹಿಸಿದ್ದರು. ಸಿಎಂ ಯಡಿಯೂರಪ್ಪ ಅವರ ನಿವಾಸಕ್ಕೆ ಮುನಿರತ್ನ ಅವರನ್ನು ಕರೆದೊಯ್ದು ಮಾತುಕತೆ ನಡೆಸಿದ್ದರು. ಈಗಲೂ ಕೂಡ ಮುನಿರತ್ನ ಪರ ಸಚಿವ ಅಶೋಕ್ ಹೆಚ್ಚಿನ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಇವರೊಂದಿಗೆ ಎಸ್.ಟಿ ಸೋಮಶೇಖರ್, ಡಾ. ನಾರಾಯಣಗೌಡ, ಗೋಪಾಲಯ್ಯ, ಭೈರತಿ ಬಸವರಾಜ್ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಪಕ್ಷದ ನಾಯಕರು ಭಾಗಿಯಾದರೂ ರಾಜ್ಯ ಕಾರ್ಯಾಲಯದ ಸಾಥ್ ಮಾತ್ರ ಕಾಣುತ್ತಿಲ್ಲ.
ತುಳಸಿ ಮುನಿರಾಜುಗೌಡ ಎಫೆಕ್ಟ್:
ಕಳೆದ ಬಾರಿಯ ಬಿಜೆಪಿ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ನ್ಯಾಯಾಲಯದ ಮೊರೆ ಹೋಗಿ ಚುನಾವಣಾ ಅಕ್ರಮದ ದೂರು ನೀಡಿದ್ದರು. ವರ್ಷಗಟ್ಟಲೇ ಮುನಿರತ್ನ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು. ಅಲ್ಲದೆ ಆರ್.ಆರ್. ನಗರದ ಬಿಜೆಪಿ ಕಾರ್ಯಕರ್ತರ ವಿರುದ್ಧ ಮುನಿರತ್ನ ಬೆಂಬಲಿಗರಿಂದ ಸುಳ್ಳು ದೂರುಗಳನ್ನು ದಾಖಲು ಮಾಡಿರುವ ಆರೋಪ ಕೇಳಿಬಂದಿತ್ತು. ಈ ಎಲ್ಲಾ ಕಾರಣಗಳಿಂದ ಮುನಿರತ್ನ ವಿರುದ್ಧ ಸಂಘ ಪರಿವಾರ ಹಾಗು ಬಿಜೆಪಿ ಕಾರ್ಯಕರ್ತರ ಅಸಮಧಾನ ಮುಂದುವರೆದಿದೆ. ಮುನಿರತ್ನಗೆ ಟಿಕೆಟ್ ಕೊಡಬಾರದು ಎನ್ನುವುದೇ ಬೇಡಿಕೆಯಾಗಿತ್ತು. ಆದರೂ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ ಎನ್ನುವ ಮನವಿಗೆ ಹೈಕಮಾಂಡ್ ಸಮ್ಮತಿಸಿ ಮುನಿರತ್ನಗೆ ಟಿಕೆಟ್ ನೀಡಿದೆ ಎನ್ನಲಾಗಿದೆ. ಸಹಜವಾಗಿ ಇದು ಕ್ಷೇತ್ರದ ಕಾರ್ಯಕರ್ತರು, ತುಳಸಿ ಮುನಿರಾಜುಗೌಡ ಬೆಂಬಲಿಗರಲ್ಲಿ ಅಸಮಧಾನ ಮೂಡಿಸಿದ್ದು ಸಂಘ ಪರಿವಾರಕ್ಕೂ ಅಸಮಧಾನದ ವಿಚಾರವಾಗಿದೆ. ಬಿಜೆಪಿ ತತ್ವ ಸಿದ್ಧಾಂತಕ್ಕೆ ಮುನಿರತ್ನ ಸರಿ ಹೊಂದುವುದಿಲ್ಲ ಎನ್ನುವ ಸೂಚನೆಯನ್ನು ಬಿಜೆಪಿ ರಾಜ್ಯ ಘಟಕಕ್ಕೆ ನೀಡಿದೆ ಎನ್ನುವ ಮಾಹಿತಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಸಂಘ ಪರಿವಾರ, ಬಿಜೆಪಿ ಕಾರ್ಯಕರ್ತರ ವಿರೋಧ ಕಟ್ಟಿಕೊಳ್ಳಲು ಸಿದ್ಧವಿಲ್ಲದ ಬಿಜೆಪಿ ಇದೀಗ ತನ್ನ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವೇ ಒಂದು ಹಂತದ ಅಂತರ ಕಾಯ್ದುಕೊಳ್ಳತೊಡಗಿದೆ. ಅದಕ್ಕಾಗಿಯೇ ರಾಜ್ಯ ಘಟಕದಿಂದ ಚುನಾವಣಾ ಕಾರ್ಯದ ಕುರಿತು ಯಾವುದೇ ಪ್ರಕಟಣೆಗಳು, ಆಹ್ವಾನಗಳು, ಮಾಹಿತಿಗಳು ಹೊರಬೀಳುತ್ತಿಲ್ಲ. ಒಂದು ರೀತಿಯ ತಟಸ್ಥ ನಿಲುವುನ್ನು ಅನುಸರಿಸುತ್ತಿದೆ ಎನ್ನಲಾಗ್ತಿದೆ.
ಬಿಎಸ್ವೈ ಸಂಪರ್ಕ:
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ನಂತರ ಮುನಿರತ್ನ ಬಿಜೆಪಿ ಕಚೇರಿಯೊಂದಿಗೆ ತಮ್ಮ ಒಡನಾಟ ಬೆಳೆಸಿಕೊಂಡಿಲ್ಲ. ಬೆರಳೆಣಿಕೆಯಷ್ಟು ಬಾರಿ ಭೇಟಿ ನೀಡಿದ್ದು ಬಿಟ್ಟರೆ, ಬಹುತೇಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಹೆಚ್ಚಿನ ಸಂಪರ್ಕ ಇರಿಸಿಕೊಂಡಿದ್ದರು. ಟಿಕೆಟ್ ಪಡೆಯುವ ವಿಚಾರದಲ್ಲಿಯೂ ಪಕ್ಷಕ್ಕಿಂತ ಯಡಿಯೂರಪ್ಪ ಅವರ ಜೊತೆ ಮುನಿರತ್ನ ಓಡಾಟ ನಡೆಸಿದ್ದನ್ನು ಇಲ್ಲಿ ಗಮನಿಸಬಹುದು.
ಒಟ್ಟಿನಲ್ಲಿ ಮುನಿರತ್ನ ಪರ ಪ್ರಚಾರ ಕಾರ್ಯದಲ್ಲಿ ಬಿಜೆಪಿ ಸಂಘಟನೆ ಒಂದು ಹಂತದ ಅಂತರ ಕಾಯ್ದುಕೊಂಡಿದ್ದು, ಸರ್ಕಾರದ ಭಾಗವಾಗಿರುವ ಸಚಿವರು ಮಾತ್ರ ಪ್ರಚಾರ ಕಾರ್ಯ ನಡೆಸುತ್ತಿರುವಂತಿದೆ.