ಬೆಂಗಳೂರು: ಒಂದು ವೇಳೆ, ಈಗ ನಡೆಯುತ್ತಿರುವ ಮಹಾರಾಷ್ಟ್ರ ಮತ್ತಿತರ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಬಿಜೆಪಿಗೆ ಅದ್ಧೂರಿ ಜಯ ತಂದರೆ ಮುಂದಿನ ವರ್ಷ ಮಾರ್ಚ್ ವೇಳೆಗೆ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಗೆ ಹೋಗಲು ಕಮಲ ಪಾಳಯ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಮಾರ್ಚ್ ತಿಂಗಳಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಅದೇ ಕಾಲಕ್ಕೆ ಕರ್ನಾಟಕದಲ್ಲೂ ಮಧ್ಯಂತರ ಚುನಾವಣೆಗೆ ಹೋಗಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಕುತೂಹಲಕಾರಿ ವಿಷಯ ಎಂದರೆ ಹಾಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ನಿರ್ಲಕ್ಷ್ಯದ ಧೋರಣೆ ತೋರುತ್ತಿದ್ದರೂ ಅವರ ನಾಯಕತ್ವದಲ್ಲಿಯೇ ಮಧ್ಯಂತರ ಚುನಾವಣೆಗೆ ಹೋಗಲು ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬಿಜೆಪಿ ಹೈಕಮಾಂಡ್ಗೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಾಗಬೇಕಿದೆ. ಆದರೆ ಯಡಿಯೂರಪ್ಪ ಅವರನ್ನು ಬದಲಿಸಿದರೆ ಪ್ರಬಲ ಲಿಂಗಾಯತ ಸಮುದಾಯ ತಿರುಗೇಟು ನೀಡಬಹುದು ಎಂಬ ಆತಂಕವೂ ಇದೆ. ಹೀಗಾಗಿಯೇ ಈ ಸಮಸ್ಯೆಯನ್ನು ಬಹಳ ಎಚ್ಚರಿಕೆಯಿಂದ ನಿವಾರಿಸಿಕೊಳ್ಳಲು ಬಯಸಿರುವ ಬಿಜೆಪಿ ಹೈಕಮಾಂಡ್ , ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಮಧ್ಯಂತರ ಚುನಾವಣೆಗೆ ಹೋಗಿ, ಗೆದ್ದು ಅಧಿಕಾರ ಹಿಡಿದ ನಂತರ ನಾಯಕತ್ವ ಬದಲಾವಣೆ ಮಾಡುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ.
ಚುನಾವಣೆಯ ನಂತರ ಯಡಿಯೂರಪ್ಪ ಅವರಿಗೆ ವಯಸ್ಸಿನ ಕಾರಣ ನೀಡಿ ಯಾವುದಾದರೂ ರಾಜ್ಯದ ರಾಜ್ಯಪಾಲ ಹುದ್ದೆಗೆ ನೇಮಕ ಮಾಡಬೇಕು ಎಂಬುದು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ತಯಾರಾಗಿರುವ ಯೋಜನೆ. ಇದೇ ಕಾರಣಕ್ಕಾಗಿಯೇ ಸದ್ದಿಲ್ಲದೇ ಒಳತಯಾರಿ ನಡೆಸುತ್ತಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಈಗಾಗಲೇ ಪಕ್ಷ ಅಧಿಕಾರಕ್ಕೆ ಬರಲು ಪೂರಕವಾಗಿ ಅಗತ್ಯವಾದ ಎಲ್ಲ ತಯಾರಿ ನಡೆಸಿ ಎಂದು ಸಂಘಟನೆಗಳ ಪ್ರಮುಖರಿಗೆ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಷಯ ಬಿಜೆಪಿ ಪಾಳೆಯದಲ್ಲೇ ಕುತೂಹಲಕ್ಕೆ ಕಾರಣವಾಗಿದ್ದು, ಸದ್ಯ ನಡೆಯುತ್ತಿರುವ ಮಹಾರಾಷ್ಟ್ರ, ಹರಿಯಾಣ ಮತ್ತಿತರ ರಾಜ್ಯಗಳ ಚುನಾವಣೆಯ ನಂತರ ಕರ್ನಾಟಕ ಮಧ್ಯಂತರ ಚುನಾವಣೆ ಎದುರಿಸುತ್ತದೆಯೇ? ಎದುರಿಸಿದರೆ ಏನಾಗುತ್ತದೆ? ಎಂಬ ಚರ್ಚೆ ಇದೀಗ ಆರಂಭವಾಗಿದೆ.