ಬೆಂಗಳೂರು: ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಐಪಿಎಸ್ (ಭಾರತೀಯ ಪೊಲೀಸ್ ಸೇವೆ) ಅಧಿಕಾರಿ ಓರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಸೋಂಕಿತ ಪೊಲೀಸ್ ಅಧಿಕಾರಿಯು ಕೆಎಸ್ಆರ್ಪಿ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಕಳೆದ ಮೂರು ದಿನಗಳ ಹಿಂದೆ ಉಸಿರಾಟದ ತೊಂದರೆ ಹಾಗೂ ಗಂಟಲು ನೋವಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆಗೊಳಪಟ್ಟಿದ್ದರು. ಸದ್ಯ ಇವರಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಕೊರೊನಾ ಖಾಯಿಲೆಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸೋಂಕಿತ ಅಧಿಕಾರಿ ಆಸ್ಟಿನ್ ಟೌನ್ನ ಕ್ವಾಟ್ರಸ್‌ನಲ್ಲಿ ವಾಸವಿದ್ದರು. ಆದರೆ ಇವರಿದ್ದ ಕೆಎಸ್ಆರ್ಪಿ ಬೆಟಾಲಿಯನ್‌ನಲ್ಲಿ ಇದುವರೆಗೆ ಯಾರೊಬ್ಬರಿಗೂ ಸೋಂಕು ಕಾಣಿಸಿಕೊಂಡಿಲ್ಲ. ಆದರೆ ಕೆಎಸ್ಆರ್ಪಿ ನಾಲ್ಕನೇ ಬೆಟಾಲಿಯನ್‌ನಲ್ಲಿ 11 ಮಂದಿಗೆ ಕೊರೊನಾ ದೃಢವಾಗಿತ್ತು. ಹೀಗಾಗಿ ಇವರಿಗೆ ಸೋಂಕು ತಗುಲಿದ್ದು ಹೇಗೆ? ಎನ್ನುವುದರ ಬಗ್ಗೆ ಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಹಾಗೆಯೇ ಐಪಿಎಸ್ ಅಧಿಕಾರಿ ಹಲವಾರು ಐಪಿಎಸ್ ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದು, ಸದ್ಯ ಇವರು ವಾಸವಿದ್ದ ಕ್ವಾಟ್ರಸ್ ಹಾಗೂ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಹಾಗೆಯೇ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.