ಬೆಂಗಳೂರು: ಸ್ಪಾ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮಾರತಹಳ್ಳಿ ಉಪವಿಭಾಗದ ಎಸಿಪಿ ಪ್ರಿಯದರ್ಶಿನಿ ನೇತೃತ್ವದ ತಂಡ ಪ್ರಕರಣದ ತನಿಖೆಯನ್ನ ಚುರುಕುಗೊಳಿಸಿದ್ದು, ವೇಶ್ಯಾವಾಟಿಕೆ ಜಾಲಕ್ಕೆ ನೆರವಾಗುತ್ತಿದ್ದ ಮಧ್ಯವರ್ತಿಗಳ ಕುರಿತು ಮಾಹಿತಿ ಕಲೆಹಾಕಲು ಮುಂದಾಗಿದೆ.
ವಿದೇಶಿ ಮಹಿಳೆಯರು ಮಾತ್ರವಲ್ಲದೆ ಸ್ಥಳೀಯರು ಸಹ ವೇಶ್ಯಾವಾಟಿಕೆಯಲ್ಲಿ ಭಾಗಿಯಾಗುತ್ತಿದ್ದ ಹಿನ್ನೆಲೆಯಲ್ಲಿ, ಅವರನ್ನು ಯಾವ ಮಧ್ಯವರ್ತಿಗಳ ಮೂಲಕ ಕರೆತರಲಾಗುತ್ತಿತ್ತು? ಯಾರ ಮೂಲಕ ಗ್ರಾಹಕರನ್ನ ಸೆಳೆಯಲಾಗುತ್ತಿತ್ತು ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಪಾನಲ್ಲಿದ್ದ 23 ಜನ ಕೆಲಸಗಾರರನ್ನು ಸಾಕ್ಷಿಗಳಾಗಿ ಪರಿಗಣಿಸಿರುವ ಪೊಲೀಸರು ಈಗಾಗಲೇ ಒಂದಷ್ಟು ಮಾಹಿತಿಗಳನ್ನ ಕಲೆಹಾಕಿದ್ದಾರೆ. ಆದರೆ ಪ್ರಮುಖ ಆರೋಪಿಯಾಗಿರುವ ಅನಿಲ್ ರೆಡ್ಡಿ, ವಿಚಾರಣೆ ವೇಳೆ ಮಧ್ಯವರ್ತಿಗಳ ಕುರಿತು ಯಾವುದೇ ಮಾಹಿತಿಯನ್ನ ಹೊರಹಾಕಿಲ್ಲ ಎಂದು ತಿಳಿದು ಬಂದಿದೆ.
ಆದ್ದರಿಂದ ದಾಳಿ ಸಂದರ್ಭದಲ್ಲಿ ರಕ್ಷಿಸಲ್ಪಟ್ಟ 44 ಜನ ಮಹಿಳೆಯರ ವಿಚಾರಣೆಯನ್ನು ಪೊಲೀಸರು ಆರಂಭಿಸಿದ್ದಾರೆ. ಅಲ್ಲದೆ ದಾಳಿ ವೇಳೆ ಸಿಕ್ಕ 47 ಜನ ಗ್ರಾಹಕರಿಗೂ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ. ಮತ್ತೊಂದೆಡೆ ಪ್ರಕರಣದ ಪ್ರಮುಖ ಆರೋಪಿ ಅನಿಲ್ ರೆಡ್ಡಿ, ರಕ್ಷಿಸಲ್ಪಟ್ಟ ಯುವತಿಯರು, ಸ್ಪಾ ಕೆಲಸಗಾರರ ಮೊಬೈಲ್ ಫೋನ್‌ಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಹಿನ್ನೆಲೆ ಏನು?: ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ನಿರತರಾಗಿದ್ದ ಮಹಾದೇವಪುರ ಠಾಣಾ ವ್ಯಾಪ್ತಿಯ ಸ್ಪಾ ಮೇಲೆ ಜನವರಿ 6ರ ರಾತ್ರಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಸುಮಾರು 4 ಗಂಟೆಗಳ ಕಾಲ ಪರಿಶೀಲನೆ ನಡೆಸಿ ವಿದೇಶ, ಹೊರ ರಾಜ್ಯ ಸೇರಿ ಒಟ್ಟು 44 ಮಹಿಳೆಯರ ರಕ್ಷಣೆ ಮಾಡಲಾಗಿತ್ತು. ಪ್ರಮುಖ ಆರೋಪಿ ಅನಿಲ್ ರೆಡ್ಡಿ ಸಹಿತ 34 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಮಾರತಹಳ್ಳಿ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಪ್ರಕರಣದ ತನಿಖೆಗೆ ಆದೇಶಿಸಲಾಗಿತ್ತು.
ಇದನ್ನೂ ಓದಿ : ಬೆಂಗಳೂರು: ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ; 44 ಮಹಿಳೆಯರ ರಕ್ಷಣೆ, 34 ಆರೋಪಿಗಳು ವಶಕ್ಕೆ