ಬೆಂಗಳೂರು: ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ನನ್ನು ಬಂಧಿಸಿರುವ ಹಲಸೂರು ಗೇಟ್ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಈವರೆಗೆ ನಡೆದ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ ಎನ್ನಲಾಗಿದೆ. ಬೆಂಗಳೂರು ನಗರ ಸೇರಿ ರಾಜ್ಯದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಟ್ಟೆ ಅಧಿಕಾರಿಗಳ ಸೋಗಿನಲ್ಲಿ ಅಕ್ರಮವಾಗಿ ಮಾಹಿತಿ ಸಂಗ್ರಹಿಸಲಾಗಿದೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ. ಬೆಂಗಳೂರಿನ ಸಿ.ವಿ.ರಾಮನ್ ನಗರ, ಬೊಮ್ಮನಹಳ್ಳಿ, ಚಿಕ್ಕಪೇಟೆ, ಮಹಾಲಕ್ಷ್ಮೀ ಲೇಔಟ್, ಮಹದೇವಪುರ, ನೆಲಮಂಗಲ, ಮಂಡ್ಯ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಅಧಿಕಾರಿ ಸೋಗಿನಲ್ಲಿ ಮತದಾರರಿಂದ ಸಂಪೂರ್ಣ ಮಾಹಿತಿ ಪಡೆದು ಸರ್ವರ್ನಲ್ಲಿ ಶೇಖರಿಸಲಾಗಿತ್ತು ಎನ್ನಲಾಗ್ತಿದೆ.
ಇದನ್ನೂ ಓದಿ: ಮತದಾರರ ಮಾಹಿತಿ ಅಕ್ರಮ ಸಂಗ್ರಹ ಆರೋಪ: ಚಿಲುಮೆ ಮುಖ್ಯಸ್ಥನ ಬಂಧನ
ಕೇವಲ ಹೆಸರು, ವಿಳಾಸದ ಜೊತೆಗೆ ಆಯಾ ಕ್ಷೇತ್ರದಲ್ಲಿ ಒಟ್ಟು ಜನಸಂಖ್ಯೆ, ಮತದಾರರ ಸಂಖ್ಯೆ, ಜಾತಿವಾರು ಸಂಖ್ಯೆ, ಪುರುಷರು, ಮಹಿಳಾ ಮತದಾರರ ಸಂಖ್ಯೆ, ಯುವ ಮತದಾರರೆಷ್ಟು?, ವೋಟರ್ ಐಡಿ ಇಲ್ಲದವರ ಸಂಖ್ಯೆ ಎಷ್ಟು ?, ಗುರುತಿನ ಚೀಟಿಯಿದ್ದರೂ ಕ್ಷೇತ್ರದಲ್ಲಿ ವಾಸಮಾಡದವರ ಸಂಖ್ಯೆ ಸೇರಿದಂತೆ ಚುನಾವಣಾ ಆಭ್ಯರ್ಥಿಗಳಿಗೆ ಅಗತ್ಯ ಮಾಹಿತಿಗಳನ್ನು ಅಕ್ರಮವಾಗಿ ಸಂಗ್ರಹಿಸಿ ನೀಡಲಾಗುತಿತ್ತು ಎನ್ನಲಾಗುತ್ತಿದೆ.