ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಮುಂದಿನ ರಸ್ತೆಯಲ್ಲಿ ಇಬ್ಬರು ಕಾನ್ಸ್ಟೇಬಲ್ ಗಾಂಜಾ ಮಾರಾಟ ಪ್ರಕರಣ ಸಂಬಂಧ ತನಿಖೆ ಪಾರದರ್ಶಕವಾಗಿ ನಡೆಸಿಲ್ಲ ಎಂದು ಆರ್.ಟಿ.ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಅಮಾನತುಗೊಂಡ ಬೆನ್ನಲೇ ಪ್ರಕರಣ ಸಿಸಿಬಿಗೆ ವರ್ಗಾವಣೆಗೊಂಡಿದೆ.
ಡ್ರಗ್ಸ್ ದಂಧೆಯಲ್ಲಿ ಪೊಲೀಸರು ಶಾಮೀಲು ಹಿನ್ನೆಲೆಯಲ್ಲಿ ಸಮರ್ಪಕವಾಗಿ ತನಿಖೆ ನಡೆಸಿ ವರದಿ ನೀಡುವಂತೆ ಸಿಸಿಬಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಜನವರಿ 13ರಂದು ಸಿಎಂ ಮನೆ ಮುಂದೆ ಭದ್ರತೆಗೆ ನಿಯೋಜನೆಯಾಗಿದ್ದ ಕೋರಮಂಗಲ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ಗಳಾದ ಸಂತೋಷ್ ಕುಮಾರ್ ಹಾಗೂ ಶಿವಕುಮಾರ್ ಎಂಬುವರನ್ನು ಬಂಧಿಸಲಾಗಿತ್ತು. ಆರ್.ಟಿ.ನಗರದ 80ನೇ ಅಡಿ ರಸ್ತೆಯಲ್ಲಿ ಗಾಂಜಾ ಮಾರಾಟ ಆರೋಪದಡಿ ಈ ಇಬ್ಬರು ಕಾನ್ಸ್ಟೇಬಲ್ಗಳು ಸೇರಿ ಐವರ ಬಂಧನವಾಗಿತ್ತು.
ಬಂಧಿತ ಆರೋಪಿಗಳು ಮೂರು ದಿನದ ಅಂತರದಲ್ಲೇ ಜಾಮೀನು ಪಡೆದಿದ್ದರು. ಆರೋಪಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನಿಗೆ ತಕರಾರು ಅರ್ಜಿ ಸಲ್ಲಿಸದೆ, ನಿರ್ಲಕ್ಷ್ಯ ವಹಿಸಿದ್ದರು. ಈ ಆರೋಪದಡಿ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು.
ಡ್ರಗ್ಸ್ ಡೀಲ್ನಲ್ಲಿ ಭಾಗಿಯಾದ ಸಿಬ್ಬಂದಿಯ ಪೂರ್ವಾಪರ ಪರಿಶೀಲನೆ ನಡೆಸದೇ ಸಿಎಂ ನಿವಾಸಕ್ಕೆ ನಿಯೋಜನೆ ಮಾಡಿದ್ದ ಕಾರಣ ಡಿಸಿಪಿ ಸೌತ್ ಈಸ್ಟ್ ಶ್ರೀನಾಥ್ ಜೋಶಿ ಹಾಗೂ ಸಿಎಂ ನಿವಾಸದ ಭದ್ರತೆಯಲ್ಲಿ ಹಾಗೂ ನಿಯೋಜಿತ ಸಿಬ್ಬಂದಿಗಳ ಮೇಲೆ ನಿಗಾ ಇರಿಸುವುದು ಮತ್ತು ಸರಿಯಾದ ರೀತಿಯಲ್ಲಿ ಭದ್ರತೆ ನೀಡದಿರುವ ಕಾರಣ ವಿಐಪಿ ಡಿಸಿಪಿ ಮಂಜುನಾಥ್ ಬಾಬು ಎಂಬುವರಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮೆಮೊ ನೀಡಿದ್ದರು.
ಓದಿ: ಜನವರಿ 23ರಿಂದ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಉತ್ತುಂಗಕ್ಕೆ: ಐಐಟಿ ಕಾನ್ಪುರ ತಜ್ಞ