ಬೆಂಗಳೂರು: ಇಂಟರ್ನ್ಯಾಷನಲ್ ಡ್ರಗ್ಸ್ ಡೀಲರ್ ಕಮ್ ಸ್ಮಗ್ಲರ್ಅನ್ನು ಬಂಧಿಸುವಲ್ಲಿ ಡಿಆರ್ ಐ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಜಿಗ್ನೇಶ್ ಭಾನುಶಾಲಿ ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಡ್ರಗ್ಸ್ ಡೀಲರ್ ಆಗಿದ್ದಾನೆ. ಈತ ಕೆಟಮಿನ್ ಕ್ಲೋರೈಡ್ ಡೀಲರ್ ಆಗಿದ್ದು, 2018 ರಲ್ಲಿ ಜಿಗ್ನೇಶ್ ಡ್ರಗ್ಸ್ ಉತ್ಪಾದನಾ ಕೇಂದ್ರದ ಮೇಲೆ ಡಿಆರ್ ಐ(ಕಂದಾಯ ಗುಪ್ತಚರ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ನಡೆಸಿದ್ದರು.
ಈತ ಮಹರಾಷ್ಟ್ರದ ಒಸಮಾಬಾದ್ ನಲ್ಲಿ ಕಚೇರಿ ಹೊಂದಿದ್ದು, ದಾಳಿ ವೇಳೆ ಕೋಟಿಗಟ್ಟಲೆ ಬೆಲೆ ಬಾಳುವ ಕೆಟಮಿನ್ ಕಟೆಂಟ್ ನ ಡ್ರಗ್ಸ್ ಸಿಕ್ಕಿತ್ತು ಎನ್ನಲಾಗ್ತಿದೆ. ಅಲ್ಲದೆ ದಾಳಿ ವೇಳೆ ಮೂರು ಜನ ಸಹಚರರನ್ನ ಕೂಡಾ ಬಂಧಿಸಲಾಗಿತ್ತು. ಈತ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ ಲುಕ್ ಔಟ್ ನೋಟಿಸ್ ಕೂಡ ಹೊರಡಿಸಲಾಗಿತ್ತು. ಸತತ ಎರಡು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಅಧಿಕಾರಿಗಳಿಗೆ ಕಳೆದ ಶುಕ್ರವಾರ ದುಬೈನಿಂದ ಬೆಂಗಳೂರಿಗೆ ಬರುತ್ತಿರುವ ಮಾಹಿತಿ ಇಮಿಗ್ರೇಷನ್ ಸೆಂಟರ್ ನ ಸಿಬ್ಬಂದಿ ಡಿಆರ್ ಐ ಅಧಿಕಾರಿಗಳಿಗೆ ತಿಳಿಸಿದ್ದು, ಜಿಗ್ನೇಶ್ನನ್ನು ತಕ್ಷಣ ಬಂಧಿಸಿದ್ದಾರೆ.
ಜಿಗ್ನೇಶ್ ಕೆಟಮಿನ್ ಕ್ಲೋರಾಯ್ಡ್ ನ ದೊಡ್ಡ ವ್ಯವಹಾರ ಮಾಡುತ್ತಿದ್ದು, ಉತ್ಪಾದಿಸಿದ ಡ್ರಗ್ಸ್ ಅನ್ನು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಿಗೆ ಕಳಿಸುತ್ತಿದ್ದ. ಜ.11, 2018 ರಲ್ಲಿ ಹೈದರಾಬಾದ್ ನಲ್ಲಿ ಕಾರ್ನಲ್ಲಿ 45.9 ಕೆಜಿ ಕೆಟಮಿನ್ ಪತ್ತೆಯಾಗಿತ್ತು. ಕಾರ್ ನಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದವರನ್ನ ಬಂಧಿಸಿದ್ದ ಅಧಿಕಾರಿಗಳು, ವಿಚಾರಣೆ ನಡೆಸಿದಾಗ ಈ ವೇಳೆ ಜಿಗ್ನೇಶ್ ಯೂನಿಟ್ ನಿಂದ ಕೆಟಮಿನ್ ತಂದಿರುವುದಾಗಿ ಬಾಯ್ಬಿಟ್ಟಿದ್ದರು ಎನ್ನಲಾಗ್ತಿದೆ.
ಜಿಗ್ನೇಶ್ ಕಲಬುರಗಿಯಲ್ಲಿ 5 ವರ್ಷ ಸಿಕ್ರೆಟ್ ಆಪರೇಷನ್ ಮೂಲಕ ಡ್ರಗ್ ಸ್ಮಗ್ಲಿಂಗ್ ಮಾಡುತ್ತಿದ್ದ ಎನ್ನಲಾಗ್ತಿದೆ. ಇಲ್ಲಿಂದಲೇ ಇಂಟರ್ನ್ಯಾಷನಲ್ ಡ್ರಗ್ಸ್ ಡೀಲರ್ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಅವರ ಸಹಾಯದಿಂದಲೇ ಮಲೇಶಿಯಾ ಹಾಗೂ ಥೈಲಾಂಡ್, ದುಬೈನಲ್ಲಿ ಅವಿತು ಕೂತಿದ್ದ ಎನ್ನಲಾಗಿದೆ. ಕಳೆದ ಶುಕ್ರವಾರ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.