ಬೆಂಗಳೂರು: ಕೃಷಿ ವಿಶ್ವವಿದ್ಯಾಲಯಗಳು ತಮ್ಮ ಕ್ಯಾಂಪಸ್ ಬಿಟ್ಟು ಹೊರ ಬರಬೇಕು. ರೈತನ ಹೊಲವನ್ನೇ ಕ್ಯಾಂಪಸ್ ಆಗಿ ಮಾಡಿಕೊಂಡು ಕೃಷಿ ಚಟುವಟಿಕೆಗೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳವನ್ನು ವೀಕ್ಷಿಸಿದ ನಂತರ ಅವರು ಮಾತನಾಡಿದರು.
ಹವಾಮಾನಕ್ಕೆ ತಕ್ಕಂತೆ ಕೃಷಿ ಕ್ಷೇತ್ರ ಬೆಳೆಸಿ :ಕೃಷಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಆಗಲಿದೆ. ಹವಾಮಾನದ ಬದಲಾವಣೆಗೆ ಅನುಗುಣವಾಗಿ ಕೃಷಿ ಕ್ಷೇತ್ರವನ್ನು ಸಜ್ಜುಗೊಳಿಸಲು ಕೃಷಿ ವಿಶ್ವವಿದ್ಯಾಲಯಗಳು ಸನ್ನದ್ದವಾಗಬೇಕು. ಕೃಷಿ ಕ್ಷೇತ್ರದಲ್ಲಿನ ಇಂದಿನ ಸವಾಲುಗಳ ಬಗ್ಗೆ ಸಂಶೋಧನೆಗಳನ್ನು ಮಾಡಬೇಕು ಎಂದು ತಿಳಿಸಿದರು. ಹವಾಮಾನ ಬದಲಾವಣೆ, ಮಣ್ಣಿನ ಸವಕಳಿ, ಹೆಚ್ಚಿನ ನೀರು ಬಳಕೆ, ಜವುಳು, ಭೂಮಿಯ ಮೆಲೆ ರಾಸಾಯನಿಕದಿಂದ ಆಗುತ್ತಿರುವ ಸಮಸ್ಯೆ, ಕಳಪೆ ಹಾಗೂ ನಕಲಿ ಬೀಜ ಮಾರಾಟ ತಡೆಯುವ ಬಗ್ಗೆ ವಿಶ್ವ ವಿದ್ಯಾಲಯಗಳು ಕ್ರಮ ಕೈಗೊಳ್ಳಬೇಕು.
ಕೃಷಿ ವಿವಿಗಳು ಕ್ಯಾಂಪಸನ್ನು ಬಿಟ್ಟು ಹೊರ ಬನ್ನಿ ರೈತನ ಹೊಲವನ್ನೇ ಕ್ಯಾಂಪಸ್ನ್ನಾಗಿ ಮಾಡಿಕೊಳ್ಳಿ. ರೈತನ ಹೊಲದಲ್ಲಿ ಎಲ್ಲವೂ ಅನಿಶ್ಚಿತತೆಯಿಂದ ಕೂಡಿದೆ. ರೈತರ ಈ ಅನಿಶ್ಚಿತತೆಯನ್ನು ನಿವಾರಿಸಲು ಉತ್ತಮ ಬೀಜ, ಕೃಷಿ ವಿಧಾನ, ಒಳ್ಳೆಯ ಔಷಧ ಸಿಂಪಡನೆ ಅಗತ್ಯವಿದೆ ಎಂದು ಸಲಹೆ ನೀಡಿದರು.
ಆಹಾರ ಕೊರತೆ ವಿಶ್ವ ತಜ್ಞರು ಎಚ್ಚರಿಕೆ:ರಾಜ್ಯದಲ್ಲಿ ನವಣಿ, ಸಾವೆ, ರಾಗಿ ಜೋಳ ಸೇರಿದಂತೆ ಎಲ್ಲ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಆಗ ಕೃಷಿ ಕೇವಲ ಆಹಾರ ಉತ್ಪಾದನೆಗೆ ಮಾತ್ರ ಸೀಮಿತವಾಗಿತ್ತು. ಈಗ ವಾಣಿಜ್ಯ ಉದ್ದೇಶಕ್ಕೆ ಕೃಷಿ ಮಾಡಲಾಗುತ್ತಿದೆ. ಆಹಾರ ಧಾನ್ಯ ಉತ್ಪಾದನೆ ಹಾಗೂ ವಾಣಿಜ್ಯ ಬೆಳೆಗಳ ನಡುವೆ ಸಮತೋಲನ ಕಾಯ್ದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಹಾರ ಸುರಕ್ಷತೆಗೆ ತೊಂದರೆಯುಂಟಾಗಬಹುದು.
ಬರುವ ದಿನಮಾನದಲ್ಲಿ ಆಹಾರ ಕೊರತೆ ಉಂಟಾಗಬಹುದೆಂದು ವಿಶ್ವ ಆಹಾರ ತಜ್ಞರು ತಿಳಿಸಿದ್ದಾರೆ. ಆಹಾರದ ಪ್ರಮಾಣ, ಧಾನ್ಯಗಳು, ನಾರಿನಾಂಶ,ಪೌಷ್ಟಿಕಾಂಶ ಇರಬೇಕು ಎಂಬ ಬಗ್ಗೆ ಅಧ್ಯಯನ ಮಾಡಿ ಈ ವಿಷಯಗಳಲ್ಲಿ ರೈತರಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಸೂಚಿಸಿದರು.
2023 ಅಂತಾರಾಷ್ಟ್ರೀಯ ಸಿರಿಧಾನ್ಯದ ವರ್ಷ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತಿದೆ. ಈ ವರ್ಷ ಅಂತಾರಾಷ್ಟ್ರೀಯ ಸಿರಿ ಧಾನ್ಯ ವರ್ಷ ಎಂದು ಘೋಷಣೆ ಮಾಡಿದ್ದರಿಂದ ರಾಜ್ಯದಲ್ಲಿ ರೈತರಿಗೆ ಹೆಚ್ಚಿನ ಅನುಕೂಲಕರವಾಗಿದೆ. ಕೇಂದ್ರ ಸರ್ಕಾರ ಸಿರಿ ಧಾನ್ಯ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಅನುದಾನವನ್ನು ರಾಜ್ಯಕ್ಕೆ ನೀಡಿದೆ. ಜನರಿಗೆ ಆರೋಗ್ಯ ಹಾಗೂ ರೈತರಿಗೆ ಲಾಭವನ್ನು ತರುವಂತಹ ಸಿರಿಧಾನ್ಯ ಕೃಷಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡಲು ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
33 ಲಕ್ಷ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ:ಗ್ರಾಮೀಣ ಆರ್ಥಿಕತೆ ಸುಧಾರಿಸಲು ಗ್ರಾಮೀಣ ಸಾಲ ಪದ್ದತಿ ಬದಲಾಗಬೇಕು. ಭೂಮಿಯಿಂದ ಸಾಲದ ಅನುಪಾತವನ್ನು ಯಾರೂ ನಿರ್ವಹಣೆ ಮಾಡಿಲ್ಲ. 20 ಸಾವಿರ ನೀಡಬೇಕಾದರೆ 7 ರಿಂದ 8 ಸಾವಿರ ನೀಡಲಾಗುತ್ತದೆ. ನಿಖರ ಸಾಲ ನೀಡಿದರೆ ರೈತ ಮಾರವಾಡಿಗಳ ಎದುರು ಕೈ ಚಾಚುವುದನ್ನು ನಿಲ್ಲಿಸುತ್ತಾನೆ. ಗ್ರಾಮೀಣ ಸಾಲ ಪದ್ದತಿ ಬದಲಾಗಬೇಕು ಎಂದು ಕೇಂದ್ರ ಹಣಕಾಸು ಸಚಿವರು ಹಾಗೂ ಕೃಷಿ ಸಚಿವರಿಗೆ ಒತ್ತಾಯವನ್ನು ಮಾಡಿದ್ದು, ರಚನೆ ಬದಲಾಯಿಸಿ, ನಬಾರ್ಡ್ ಈ ಸಾಲ ಪದ್ದತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ. ಈ ಕೆಲಸಗಳಾದರೆ ರೈತರ ಬದುಕಿಗೆ ನಿಶ್ಚಿತತೆಯನ್ನು ತರಬಹುದು. ರಾಜ್ಯ ಸರ್ಕಾರ ಈ ವರ್ಷ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ನೀಡಿದ್ದು, 3 ಲಕ್ಷ ಹೊಸ ರೈತರಿಗೆ ಸಾಲ ನೀಡಲಾಗಿದ್ದು ಇದೊಂದು ದಾಖಲೆ ಎಂದು ತಿಳಿಸಿದರು.
10 ಹೆಚ್ಪಿವರೆಗೆ ಉಚಿತ ವಿದ್ಯುತ್: ರೈತಶಕ್ತಿ ಯೋಜನೆ 10 ದಿನಗಳ ಕಾಲದಲ್ಲಿ ಪ್ರಾರಂಭಿಸಲಾಗಿದೆ. ಯಶಸ್ವಿನಿ ಯೋಜನೆಯನ್ನು ಮರುಪ್ರಾರಂಭಿಸಲಾಗಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. 10 ಹೆಚ್.ಪಿ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಯೋಜನೆಗೆ ಶುಲ್ಕ ಪಡೆಯಬೇಕೆಂದು ಹಿಂದಿನ ಸರ್ಕಾರಗಳು ಆಜ್ಞೆ ಮಾಡಿದ್ದವು. ಒಂದು ಬೊರೆವೆಲ್ಗೆ 10 ಸಾವಿರ ರೂ.ಗಳನ್ನು ಪಡೆಯಬೇಕೆಂಬ ಪ್ರಸ್ತಾವನೆ ಹಿಂದಿನ ಸರ್ಕಾರದಲ್ಲಿತ್ತು ಎಂದರು.
11 ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ: ಆದರೆ ಒಂದು ಬೊರೆವೆಲ್ಗೆ 10 ಸಾವಿರ ರೂ. ಪ್ರಸ್ತಾವನೆಯನ್ನು ಅನುಷ್ಠಾನ ಮಾಡುವ ಧೈರ್ಯ ಮಾಡಲಿಲ್ಲ. ನಮ್ಮ ರಾಜ್ಯ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುತ್ತಿರುವುದರಿಂದ ಹಾಗೂ ಸೋಲಾರ್ ಕೃಷಿ ಪಂಪ್‍ಸೆಟ್ ಗಳಿಗೆ ನರೇಂದ್ರ ಮೋದಿಯವರ ಸರ್ಕಾರ ಯೋಜನೆಗಳನ್ನು ನೀಡಿ ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. ರೈತ ವಿದ್ಯಾ ನಿಧಿಯಡಿ 11 ಲಕ್ಷ ರೈತರ ಮಕ್ಕಳು ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು.
ಇದನ್ನೂಓದಿ:ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ: ಮನಸೆಳೆದ ಸಿರಿಧಾನ್ಯ ಮಾರಾಟ, ಬಹುವಿಧದ ಭಕ್ಷ್ಯ ಖಾದ್ಯದ ಮಳಿಗೆಗಳು..!