ಬೆಂಗಳೂರು: ಬರವಣಿಗೆಯೊಂದರಿಂದಲೇ ಅನ್ನ ಮತ್ತು ಆತ್ಮ ಸಂತೋಷ ದುಡಿದುಕೊಳ್ಳಲು ತೀರ್ಮಾನಿಸಿದಂತೆ ಬದುಕುತ್ತಿದ್ದವರು ಪತ್ರಕರ್ತ ರವಿ ಬೆಳಗೆರೆಗೆ ಬರವಣಿಗೆ ಬಿಟ್ಟು ಬೇರೇನನ್ನೂ ಮಾಡಲು ತನಗೆ ಬಾರದು ಅಂತ ತೀರ್ಮಾನಿಸಿದ್ದರು. ತಮ್ಮ 62ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಅವರ ಕಂಡ ಏಳು-ಬೀಳಿನ ಹಾದಿ ಬಗ್ಗೆ ಒಂದಿಷ್ಟು ಮಾಹಿತಿ...
62ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ ಅಕ್ಷರ ಗಾರುಡಿಗ. ಹುಟ್ಟಿದ್ದು 1958 ರ ಮಾರ್ಚ್ 15 ರಂದು, ಬಳ್ಳಾರಿಯಲ್ಲಿ. ಎರಡು ವರ್ಷ ತುಮಕೂರಿನ ಸಿದ್ದಗಂಗಾ ಹೈಸ್ಕೂಲಿನಲ್ಲಿ ಓದಿದ್ದು ಬಿಟ್ಟರೆ ಬಿ.ಎ. ವರೆಗಿನ ವ್ಯಾಸಂಗ ನಡೆದಿದ್ದು ಬಳ್ಳಾರಿಯಲ್ಲಿ. ನಂತರ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಧಾರವಾಡದಲ್ಲಿ ಓದಿದರು.
ಅವರು ಕೆಲಕಾಲ ಬಳ್ಳಾರಿ, ಹಾಸನ ಮತ್ತು ಹುಬ್ಬಳಿಯ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕನಾಗಿ ಕೆಲಸ ಮಾಡಿದ್ದಾರೆ. ಅದಕ್ಕೂ ಮುಂಚೆ ಮತ್ತು ಅದರ ನಂತರ ಸರಿಸುಮಾರು 9 ವೃತ್ತಿಗಳನ್ನು ಬದಲಿಸಿದ್ದಾರೆ. ಹೈಸ್ಕೂಲ್ ಮೇಷ್ಟ್ರು, ಹೋಟೆಲ್ ಮಾಣಿ, ರೂಂ ಬಾಯ್, ರಿಸೆಪ್ಷನಿಸ್ಟ್, ಹಾಲು ಮಾರುವ ಗೌಳಿ, ದಿನಪತ್ರಿಕೆ ಹಂಚುವ ಹುಡುಗ, ಮೆಡಿಕಲ್ ರೆಪ್ರೆಸೆಂಟೇಟಿವ್, ಪ್ರಿಂಟಿಂಗ್ ಪ್ರೆಸ್ ಮಾಲೀಕ, ಥಿಯೇಟರಿನಲ್ಲಿ ಗೇಟ್ ಕೀಪರ್, ಕಾಲೇಜಿನಲ್ಲಿ ಉಪನ್ಯಾಸಕ, ಮನೆಪಾಠದ ಮೇಷ್ಟ್ರು ಹೀಗೆ ನಾನಾ ಕಡೆ ಬೆವರು ಹರಿಸಿದ್ದರು.
ಕರ್ನಾಟಕದ ಅಷ್ಟೂ ಪತ್ರಿಕೆಗಳಿಗೆ ಅವರು ತಮ್ಮ ಬರಹವನ್ನು ಪರಿಚಯಿಸಿದ್ದಾರೆ. ಅನೇಕ ಪತ್ರಿಕೆಗಳಿಗೆ ಕೆಲಸ ಮಾಡಿದ್ದಾರೆ. ತುಂಬಾ ಚಿಕ್ಕವಯಸ್ಸಿನಲ್ಲೇ ಅವರಗಿಂತ ಜಾಸ್ತಿ ವಯಸ್ಸಾದ ಪತ್ರಿಕೆಗಳಿಗೆ ಸಂಪಾದಕನಾಗಿ ಕೆಲಸ ಮಾಡಿದ್ದರು ರವಿ ಬೆಳಗೆರೆ.
ಗೋಲಿಬಾರ್, ಅರ್ತಿ, ಮಾಂಡೋವಿ, ಮಾಟಗಾತಿ, ಒಮರ್ಟಾ, ಸರ್ಪ ಸಂಬಂಧ, ಹೇಳಿ ಹೋಗು ಕಾರಣ, ನೀ ಹಿಂಗ ನೋಡಬ್ಯಾಡ ನನ್ನ, ಗಾಡ್‌ಫಾದರ್ , ಕಾಮರಾಜ ಮಾರ್ಗ, ಹಿಮಾಗ್ನಿ, ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು?, ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, ರಂಗವಿಲಾಸ್ ಬಂಗಲೆಯ ಕೊಲೆಗಳು, ಬಾಬಾ ಬೆಡ್‌ರೂಂ ಹತ್ಯಾಕಾಂಡ, ಪ್ರಮೋದ್ ಮಹಾಜನ್ ಹತ್ಯೆ, ಪಾಪಿಗಳ ಲೋಕದಲ್ಲಿ, ಭೀಮಾ ತೀರದ ಹಂತಕರು, ಡಿ ಕಂಪನಿ ಸೇರಿದಂತೆ ಹೀಗೆ ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹಗಳು, ಜೀವನ ಕಥನ ಒಳಗೊಂಡ ಅವರ ಸುಮಾರು 70 ಪುಸ್ತಕಗಳು ಪ್ರಕಟಗೊಂಡಿವೆ. ಖುಷ್ವಂತ್ ಸಿಂಗ್, ಛಲಂ, ಪ್ರತಿಮಾ ಬೇಡಿ, ಬ್ರಿಗೇಡಿಯರ್ ಜಾನ್ ಪಿ ದಳವಿ, ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ ವೇಜ್, ವಿನೋದ್ ಮಹ್ತಾ ಮುಂತಾದವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಸಣ್ಣ ಕಥೆ ಅವರಿಗೆ ಅತೀ ಇಷ್ಟವಾದ ಪ್ರಾಕಾರ. ಅದರಲ್ಲೂ ಅವರಿಗೆ ಪ್ರಶಸ್ತಿ, ಬಹುಮತಿಗಳು ಬಂದಿದೆ. ಅವರು 1995ರಲ್ಲಿ ಕಪ್ಪು ಸುಂದರಿ ’ಹಾಯ್ ಬೆಂಗಳೂರ್!’ ಕನ್ನಡ ವಾರಪತ್ರಿಕೆಯನ್ನು ಆರಂಭಿಸಿದರು. ”ಓ ಮನಸೇ’ ಪಾಕ್ಷಿಕದ ಸಂಪಾದಕರಾಗಿದ್ದರು. ಪ್ರಾರ್ಥನಾ ಎಜುಕೇಷನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದರು.
ನಾ ಸಾವಿಗೆ ಹೆದರೋದಿಲ್ಲ.. ಯಾಕಂದ್ರೆ ನಾ ಇರೋ ತನಕ ಅದು ಬರೋದಿಲ್ಲ.. ಅದು ಬಂದಾಗ ನಾ ಇರೋದಿಲ್ಲ.. ಅನ್ನೋ ಶಬ್ದ ಗಾರುಡಿಗ ದ.ರಾ. ಬೇಂದ್ರೆಯವರ ಮಾರ್ಮಿಕ ಮಾತುಗಳನ್ನು ರವಿ ಬೆಳಗೆರೆ ಹಿಂದೊಮ್ಮೆ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಈ ಮಾತಿನಂತೆಯೇ ನಿರ್ಭಿಡೆಯಿಂದ ಬದುಕಿದ ರವಿ ಬೆಳಗೆರೆ ಕೊನೆ ಕ್ಷಣದ ತನಕ ಬರಹ ಕೃಷಿ ನಿಲ್ಲಿಸಿರಲಿಲ್ಲ. ಸಾವಿಗೂ ಒಂದು ಗಂಟೆ ಮೊದಲು ಬರವಣಿಗೆಯಲ್ಲಿಯೇ ತೊಡಗಿದ್ದ ಅವರಿಗೆ, ಹೃದಯಾಘಾತವಾಗಿತ್ತು. ಬಳಿಕ ಅಲ್ಲಿನ ಸಿಬ್ಬಂದಿ ಅಪೋಲೋ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಸುಕಿನಜಾವ ಸುಮಾರು 2.30ರ ವೇಳೆಗೆ ಅವರು ಉಸಿರು ನಿಲ್ಲಿಸಿದ್ದಾರೆ.
ರವಿ ಬೆಳಗೆರೆಯವರಿಗೆ ಇಬ್ಬರು ಪತ್ನಿಯರಿದ್ದು ನಾಲ್ವರು ಮಕ್ಕಳಿದ್ದಾರೆ. ಮೊದಲ ಪತ್ನಿ ಲಲಿತಾ ಅವರ ಮಕ್ಕಳಾದ ಕರ್ಣ, ಭಾವನ ಬೆಳಗೆರೆ, ಚೇತನ ಬೆಳಗೆರೆ ಮತ್ತು ಎರಡನೇ ಪತ್ನಿ ಯಶೋಮತಿ ಹಾಗೂ ಮಗ ಹಿಮವಂತ ಅವರನ್ನು ಅಗಲಿದ್ದಾರೆ. ಖ್ಯಾತ ಚಿತ್ರ ನಟ ಶ್ರೀನಗರ ಕಿಟ್ಟಿ ಅವರ ಎರಡನೇ ಮಗಳು ಭಾವನಾ ಬೆಳಗೆರೆ ಪತಿ.