ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದ ಉಂಟಾದ ನೆರೆ ಪೀಡಿತ ಪ್ರದೇಶದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೋಟ್ನಲ್ಲಿ ಸಂಚಾರ ಮಾಡಿದ ವಿಚಾರ ಇಂದು ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.
ಅತಿವೃಷ್ಟಿ ಕುರಿತಾಗಿ ನಿಯಮ 69 ಅಡಿ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ, ಮಳೆ ಹಾನಿ ಪೀಡಿತ ಪ್ರದೇಶ ಮಹದೇವಪುರಕ್ಕೆ ಹೋಗಿದ್ದೆ. ಅಲ್ಲಿ ಬೋಟ್ನಲ್ಲೇ ತಿರುಗಾಡಬೇಕಾಯಿತು ಎಂದರು. ಈ ವೇಳೆ, ಬಿಜೆಪಿ ಸದಸ್ಯ ಅರವಿಂದ್ ಲಿಂಬಾವಳಿ, ರಸ್ತೆ ಇತ್ತು. ಆದರೆ ನೀವು ಏಕೆ ಬೋಟ್ನಲ್ಲಿ ಹೋಗಿದ್ರಿ ಎಂದು ಪ್ರಶ್ನಿಸಿದರು.
ಅದಕ್ಕೆ ಬೇರೆ ರಸ್ತೆ ಇತ್ತಾ ಎಂದು ಮರು ಪ್ರಶ್ನಿಸಿದ ಸಿದ್ದರಾಮಯ್ಯ, ನೀವು ಬಂದಿದ್ದರೆ ಬೇರೆ ರಸ್ತೆಯಲ್ಲಿ ಹೋಗಬಹುದಿತ್ತು ಎಂದು ತಿರುಗೇಟು ನೀಡಿದರು. ಈ ವೇಳೆ ನೀವು ಬರುತ್ತೀರಿ ಎಂದು ಗೊತ್ತಿದ್ದರೆ ನಾವು ಸ್ವಾಗತ ಮಾಡುತ್ತಿದ್ದೆವು ಎಂದು ಲಿಂಬಾವಳಿ ಹೇಳಿದರು. ಅಲ್ಲದೇ, ನಿಮ್ಮನ್ನು ಹಿಂದೆಯಿಂದ ಕರೆದುಕೊಂಡು ಹೋಗಿದ್ದಾರೆ. ಮಿಸ್ಗೈಡ್ ಮಾಡುವವರು ನಿಮ್ಮ ಸುತ್ತ ಬಹಳ ಜನ ಇದ್ದಾರೆ ಎಂದು ಕಾಲೆಳೆದರು.
ಈ ವೇಳೆ ಸಿದ್ದರಾಮಯ್ಯ ಬೆಂಬಲಕ್ಕೆ ಬಂದ ರಾಮಲಿಂಗಾರೆಡ್ಡಿ ಮಾತನಾಡಿ, ಸಿಎಂ ಎಲ್ಲಿ ಹೋಗಿದ್ದರು?. ಅದೇ ರಸ್ತೆಯಲ್ಲಿ ನಾವು ಹೋಗಿದ್ದೆವು ಎಂದರು. ಅದಕ್ಕೆ ಸಿಎಂ ಅಲ್ಲಿಗೆ ಬಂದಿಲ್ಲ ಎಂದ ಲಿಂಬಾವಳಿ ಹೇಳಿದರು. ಆಗ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶ ಮಾಡಿ, ಒಂದೂವರೆ ಫೀಟ್ ನೀರಿನಲ್ಲಿ ನಮ್ಮ ನಾಯಕರನ್ನು ಬೋಟ್ನಲ್ಲಿ ಕರೆದುಕೊಂಡು ಹೋದರಲ್ಲ ಪುಣ್ಮಾತ್ಮರು, ಯಾರಪ್ಪಾ? ಎಂದು ಕಾಲೆಳೆದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಒಂದೂವರೆ ಅಡಿಯಲ್ಲಿ ದೋಣಿ ಹೋಗಲು ಸಾಧ್ಯವೇ ಇಲ್ಲ ಎಂದರು.
ಅಲ್ಲದೇ, ಮಾಧ್ಯಮದಲ್ಲಿ ನೋಡಿದೆ ಮೊಣಕಾಲುವರೆಗೆ ನೀರಿತ್ತು ಎಂದು ಸಿಎಂ ಹೇಳಿದ್ದಕ್ಕೆ ಸಿದ್ದರಾಮಯ್ಯ, ಹೋಗಿ ಜನರನ್ನು ಭೇಟಿ ಮಾಡೋಣ. ಅವರು ಒಂದೂವರೆ ಅಡಿ ಇತ್ತು ಎಂದರೆ ನೀವು ಹೇಳಿದ ಹಾಗೆ ಕೇಳೋಣ ಎಂದು ಸವಾಲು ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾನು ಮೂರು ಫೀಟ್ ಇದ್ದಾಗ ನಡೆದುಕೊಂಡು ಹೋಗಿದ್ದೇನೆ. ನಿಮಗೆ ಯರೋ ಮಿಸ್ ಗೈಡ್ ಮಾಡಿರಬಹುದು ಎಂದರು.
ಇದಕ್ಕೆ ಸಿದ್ದರಾಮಯ್ಯ, ನಾನು ನನ್ನ ಸ್ವಂತ ಬೋಟ್ನಲ್ಲಿ ಹೋಗಿಲ್ಲ. ಅದು ಎನ್ಡಿಆರ್ಎಫ್ ಬೋಟ್. ನಾನು ಹೋದ ದಿನ ಐದು ಫೀಟ್ ನೀರು ಇತ್ತು. ಎಸ್ಡಿಆರ್ಎಫ್ ಸಿಬ್ಬಂದಿ ಮೋಟಾರು ಎಳೆದೇ ಓಡಿಸಿದರು. ಒಂದೂವರೆ ಅಡಿ ನೀರು ಇತ್ತು ಎಂಬುದು ಸರಿಯಲ್ಲ ಎಂದರು. ಅಷ್ಟೇ ಅಲ್ಲದೆ, ಕೆಲವರಿಗೆ ಕಣ್ಣಿಗೆ ಆಳ ಗೊತ್ತಾಗಲ್ಲ ಎಂದು ಸಿಎಂಗೆ ತಿರುಗೇಟು ನೀಡಿದರು.
ಅಶೋಕ್ ನೀನು ಕಬಡ್ಡಿ ಆಡುತ್ತಿದ್ದೆ ಅಲ್ವಾ?: ಇದೇ ವೇಳೆ ರಾಜ್ಯದಲ್ಲಿ ಮಳೆಯಿಂದ ಒಟ್ಟು 24 ಸಾವಿರ ಮನೆಗಳು ಹಾನಿಯಾಗಿವೆ. ಕೇಂದ್ರಕ್ಕೆ 7,647.13 ಸಾವಿರ ಕೋಟಿ ರೂ. ನಷ್ಟ ಹೇಳಿದ್ದೀರಿ. ಎಸ್ಡಿಆರ್ಎಫ್ ಪ್ರಕಾರ 1,012 ಕೋಟಿ ರೂ. ಕೇಂದ್ರದ ಬಳಿ ಪರಿಹಾರ ಕೇಳಿದ್ದೀರಿ. ಆದರೆ, ಕೇಂದ್ರ ಇಲ್ಲಿ ತನಕ ಒಂದು ಪೈಸೆ ಕೂಡ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಆಗ ಕಂದಾಯ ಸಚಿವ ಆರ್ ಅಶೋಕ್ ಎದ್ದು ನಿಂತರು. ಇದಕ್ಕೆ, ಅಶೋಕ್ ನಿಲ್ಲಬೇಡಿ, ಯಾಕೆ ಎಕ್ಸಸೈಜ್ ಮಾಡ್ತೀರಿ?. ನಿನ್ನ ಎನರ್ಜಿ ಚೆನ್ನಾಗಿ ಇದೆ. ನೀನು ದೈಹಿಕವಾಗಿ ಗಟ್ಟಿ ಇದ್ದೀಯಾ, ಕಬಡ್ಡಿ ಆಡುತ್ತಿದ್ದೇ ಅಲ್ವಾ? ಎಂದು ಸಿದ್ದರಾಮಯ್ಯ ಕುಟುಕಿದರು. ಇದಕ್ಕೆ ಸಚಿವ ಅಶೋಕ್ ಮಾತನಾಡಿ, ಹೌದು 20 ವರ್ಷ ಆಡಿದ್ದೇನೆ. ನಾನು ಹೈಸ್ಕೂಲ್ ದಿನದಲ್ಲಿ ಆಡುತ್ತಿದ್ದೆ. ಆಮೇಲೆ ಬಿಟ್ಟೆ. ಆಮೇಲೆ ಆಡೋಕೆ ಆಗಲಿಲ್ಲ. ಈಗ ಯಾವ ಆಟ ಆಡೋಕು ಆಗೋದಿಲ್ಲ. ಕಬ್ಬಡಿ ಆಡಿದರೆ ಶುಗರ್ ಬಿಪಿ ಬರಲ್ಲ ಸರ್ ಎಂದು ಉತ್ತರಿಸಿದರು. ಆಗ ಸದನದಲ್ಲಿ ಸದಸ್ಯರು ನಗೆಯ ಬುಗ್ಗೆಯೇ ಹರಿಯಿತು.
ಇದನ್ನೂ ಓದಿ: ಅ.2ರಿಂದ ಯಶಸ್ವಿನಿ ಯೋಜನೆ ಮರು ಜಾರಿ: ಸಚಿವ ಎಸ್ಟಿ ಸೋಮಶೇಖರ್ ಸ್ಪಷ್ಟನೆ