ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಕಿರುಕುಳ ನೀಡಲಾಗುತ್ತಿದ್ದು, ರಾಜಕೀಯ ಪಿತೂರಿ ನಡೆಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ತೊಂದರೆ ನೀಡಬೇಕು ಎಂಬ ಉದ್ದೇಶದಿಂದ ಈ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಸಿಬಿಐ 2020ರ ಅಕ್ಟೋಬರ್ 3ರಂದು ಎಫ್ಐಆರ್ ದಾಖಲಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಶಿವಕುಮಾರ್ ಅರ್ಜಿ ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಧಾರವಾಡ ಪೀಠಕ್ಕೆ ಡಿಕೆಶಿ ಪರ ವಕೀಲರು ತಮ್ಮ ವಾದಲ್ಲಿ ವಿವರಿಸಿದರು.
ಅಲ್ಲದೆ, ಅರ್ಜಿದಾರರು ಸಾರ್ವಜನಿಕ ಸೇವಕರಾಗಿದ್ದಾರೆ. ಅವರ ವಿರುದ್ಧ ದಾಖಲಿಸಿರುವ ಈ ಪ್ರಕರಣದಲ್ಲಿ ಅವರ ಕುಟುಂಬದ ಸದಸ್ಯರ ಆದಾಯ ಪರಿಗಣಿಸಲಾಗಿದೆ. ಜಾಮೀನು ದೊರೆತ ನಂತರ ಜಾರಿ ನಿರ್ದೇಶನಾಲಯದ ಮಾಹಿತಿ ಅನುಸಾರ ಸಿಬಿಐ ಪ್ರಕರಣ ದಾಖಲಿಸಲಾಗಿದೆ. ಇದು ಅರ್ಜಿದಾರರಿಗೆ ಕಿರುಕುಳ ನೀಡುವ ಉದ್ದೇಶವಾಗಿದ್ದು, ದುರುದ್ದೇಶಪೂರಿತ ಕ್ರಮವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಶಿವಕುಮಾರ್ ಮನೆಯಲ್ಲಿ 41 ಲಕ್ಷ ದೊರೆತಿದೆ ಎಂಬ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಎರಡು ಪ್ರಕರಣ ದಾಖಲಿಸಿದೆ. ಜೊತೆಗೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಮತ್ತೊಂದು ಪ್ರಕರಣ, ಆದಾಯ ತೆರಿಗೆ ವಂಚನೆ ಆರೋಪದಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರದ್ದು ಪಡಿಸಿತ್ತು. ಬಳಿಕ ಹೈಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಇದೀಗ ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ ಎಂದು ನ್ಯಾಯಾಲಯಕ್ಕೆ ವಿವರಣೆ ನೀಡಿದರು.
(ಓದಿ: ಪ್ರಧಾನಿ ಅವರ ಕೊಡುಗೆ ಕೇವಲ ರಾಜ್ಯಕ್ಕೆ ಮಾಲಾರ್ಪಣೆ ಮಾಡೋದಷ್ಟೇ: ಡಿಕೆ ಶಿವಕುಮಾರ್ ವ್ಯಂಗ್ಯ)