ಬೆಂಗಳೂರು: ಬಿಹಾರ ಮತ್ತು ಒಡಿಶಾಗೆ ತೆರಳಲು ರೈಲು ನಿಲ್ದಾಣಕ್ಕೆ ಬಂದಿದ್ದ ಕಾರ್ಮಿಕರು ಗಲಾಟೆ ಮಾಡಿ ಪೀಣ್ಯ ಇನ್‌ಸ್ಪೆಕ್ಟರ್ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿ ನಡೆದಿದೆ.
ಪೀಣ್ಯ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮುದ್ದುರಾಜ್ ಹಲ್ಲೆಗೊಳಗಾದವರು. ಇಂದು ತಮ್ಮ ತಮ್ಮ ಊರುಗಳಿಗೆ ತೆರಳಲು ಬಂದಿದ್ದ ಬಿಹಾರ ಮತ್ತು ಒಡಿಶಾದ ಕಾರ್ಮಿಕರು ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿ ಸೇರಿದ್ದರು. ಅವರನ್ನು ತಡೆದ ಪೊಲೀಸರು, ರೈಲು ಇಲ್ಲಿಂದ ಹೊರಡುವುದಿಲ್ಲ ಎಂದು ಹೇಳಿ ಅವರನ್ನು ಬಸ್‌ಗಳಲ್ಲಿ ತುಂಬಿಕೊಂಡು ನೆಲಮಂಗಲದ ಹತ್ತಿರವಿರುವ ಬಿಐಇಸಿ ಮೈದಾನದ ಬಳಿ ಬಿಡಲಾಗಿತ್ತು. ಸಂಜೆ ವೇಳೆ ಬಿಹಾರಕ್ಕೆ ಹೋಗಲು ರೈಲು ವ್ಯವಸ್ಥೆ ಮಾಡುವಂತೆ ಪಟ್ಟು ಹಿಡಿದು ಗಲಾಟೆ ನಡೆಸಿದ್ದಾರೆ.
ಗಲಾಟೆ ವಿಕೋಪಕ್ಕೆ ತಿರುಗಿದ್ದು, ಆಗ ಕರ್ತವ್ಯದಲ್ಲಿ ಇನ್‌ಸ್ಪೆಕ್ಟರ್ ಮುದ್ದುರಾಜ್‌ಗೆ ಕಾರ್ಮಿಕರು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.