ಬೆಂಗಳೂರು: ನಗರ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿರುವ ಹಳೆಯ ಪಾರಂಪರಿಕ ಕಟ್ಟಡ ನವೀಕರಣ ಹಾಗೂ ಹೊಸ ಕಟ್ಟಡದ ನಿರ್ಮಾಣದ ಬಗ್ಗೆ ಸ್ಥಳ ಪರಿಶೀಲನೆ ಹಾಗೂ ಉನ್ನತ ಅಧಿಕಾರಿಗಳ ಸಭೆಯನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನಡೆಸಿದರು.
ಪ್ರಸ್ತುತ 19 ಕೋಟಿ ರೂ. ಅನುದಾನ ಲಭ್ಯವಿದ್ದು ಇನ್ನೂ ಹೆಚ್ಚಿನ ಅನುದಾನವನ್ನು ಮುಂದಿನ ಆಯವ್ಯಯದಲ್ಲಿ ಪಡೆಯುವ ನಿರೀಕ್ಷೆಯಿದೆ. ಪೂರ್ಣ ಪ್ರಮಾಣದ, ಆಧುನಿಕ ಸೌಲಭ್ಯ ಹೊಂದಿದ ಹಾಗು ಮುಂದಿನ 30 ವರ್ಷಗಳ ವಿಕಾಸಕ್ಕೆ ಅನುಗುಣವಾಗಿ ಸಂಕೀರ್ಣವನ್ನು ನಿರ್ಮಿಸಲು ಅಗತ್ಯ ಯೋಜನೆ ತಯಾರಿಸಲು ಸೂಚಿಸಿದರು.
ಪ್ರಸ್ತುತ ಕಾನೂನು ಸುವ್ಯವಸ್ಥೆ, ಡ್ರಗ್ಸ್ ನಿಯಂತ್ರಣ ಮುಂತಾದ ವಿಷಯಗಳಲ್ಲಿ ಪೊಲೀಸರು ಕೈಗೊಂಡಿರುವ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಗತ್ಯ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲು ಗೃಹ ಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.