ಬೆಳಗಾವಿ: ಕರ್ನಾಟಕದ ಅತಿ ಹಳೆಯ ಹಾಗೂ ಎರಡನೇ ಅತಿದೊಡ್ಡ ಜೈಲು ಎಂಬ ಕೀರ್ತಿಗೆ, ಬೆಳಗಾವಿಯ ಹಿಂಡಲಗಾ ಜೈಲು ಪಾತ್ರವಾಗಿದೆ. ಆದರೆ ಹಿಂಡಲಗಾ ಜೈಲಿನ ಅಧಿಕಾರಿಗಳ ವರ್ತನೆಗೆ ಕೈದಿಗಳ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗುತ್ತಿದ್ದು, ಈ ಬಗ್ಗೆ ಗಮನಹರಿಸಬೇಕಿದ್ದ ರಾಜ್ಯ ಸರ್ಕಾರ ಕೂಡ ಮೌನಕ್ಕೆ ಶರಣಾಗಿದೆ. ಕೊರೊನಾ ನೆಪ ಹೇಳಿ ಕೈದಿಗಳಿಗೆ ಅವರ ಕುಟುಂಬಸ್ಥರು ಹಾಗೂ ಸಂಬಂಧಿಕರ ಭೇಟಿಗೆ ಅವಕಾಶ ನಿರಕಾರಿಸಲಾಗುತ್ತಿದೆ. ಫೋನ್ ಮೂಲಕ ಸಂಭಾಷಣೆಗೆ ಕೂಡ ಅವಕಾಶವನ್ನೂ ಕಲ್ಪಿಸುತ್ತಿಲ್ಲ.
ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ ಅಂದರೆ 8 ತಿಂಗಳಿಂದ ಕೈದಿಗಳು ಅವರ ಕುಟುಂಬಸ್ಥರನ್ನು ಭೇಟಿಯಾಗಿಲ್ಲ. ಈ ಮೊದಲು ಜೀವಾವಧಿ ಸೇರಿದಂತೆ ಇತರ ಕೈದಿಗಳಿಗೆ ಹಾಗೂ ವಿಚಾರಣಾಧೀನ ಕೈದಿಗಳಿಗೆ ಮೊದಲು ವಾರಕ್ಕೊಮ್ಮೆ ಕುಟುಂಬಸ್ಥರ, ಸಂಬಂಧಿಕರ ಹಾಗೂ ಸ್ನೇಹಿತರ ಭೇಟಿಗೆ ಅವಕಾಶ ನೀಡಲಾಗುತ್ತಿತ್ತು.
ಬೆಳಗಾವಿಯಲ್ಲಿ ಕೊರೊನಾ ಜಾಸ್ತಿಯಾಗಿ ಹಬ್ಬುತ್ತಿದ್ದು, ಜೈಲಿಗೂ ಕಾಲಿಟ್ಟಿತ್ತು. ಈ ಕಾರಣಕ್ಕೆ ಹೊಸ ಕೈದಿಗಳನ್ನು ಕ್ವಾರಂಟೈನ್ ಮಾಡಲಾಗುತ್ತಿದ್ದು, ಮೊದಲಿದ್ದ ಕೈದಿಗಳನ್ನು ಸಂಬಂಧಿಕರ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ. ಮಾನವೀಯ ದೃಷ್ಟಿಯಿಂದ ಫೋನ್ ಮೂಲಕವಾದರೂ ಕುಟುಂಬಸ್ಥರ ಜತೆಗೆ ಮಾತನಾಡಲು ಅವಕಾಶ ನೀಡಬೇಕಿತ್ತು. ಅದಕ್ಕೂ ಇಲ್ಲಿನ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ.
ಇದರಿಂದ ಕುಟುಂಬಸ್ಥರ ಜತೆಗೆ ಮಾತನಾಡದೇ ಜೈಲಿನಲ್ಲೇ ಕೈದಿಗಳು ರೋಧಿಸುವ ಸ್ಥಿತಿ ನಿರ್ಮಾಣವಾಗಿದೆ. ಕುಟುಂಬಸ್ಥರ ಭೇಟಿ ಹಾಗೂ ಮಾತನಾಡಲು ಅವಕಾಶ ನೀಡದಿರುವುದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಹಿಂಡಲಗಾ ಜೈಲಿನಲ್ಲಿ 52 ಮಹಿಳೆಯರು ಸೇರಿ ಒಟ್ಟು 864 ಕೈದಿಗಳಿದ್ದಾರೆ. ಒಂದು ಸಾವಿರ ಕೈದಿಗಳ ಸಾಮರ್ಥ್ಯ ಹೊಂದಿರುವ ಈ ಕಾರಾಗೃಹವು, ಪರಪ್ಪನ ಅಗ್ರಹಾರದ ನಂತರದ ಅತಿದೊಡ್ಡ ಜೈಲಾಗಿದೆ.