ಬೆಂಗಳೂರು: ನಗರದಲ್ಲಿ ಜನವರಿಯಿಂದ ಜುಲೈ ತಿಂಗಳವರೆಗೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸೋಂಕಿತರ ಸಂಖ್ಯೆಗಳು ಜೂನ್ ಬಳಿಕ 7 ರಿಂದ 8 ಸಾವಿರ ತಲುಪಿರುವ ವರದಿಯಾಗುತ್ತಿದೆ ಎಂದು ಮಾಜಿ ಸಚಿವ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ. ಪಾಟೀಲ್ ಕಳವಳ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರವೊಂದರಲ್ಲಿಯೇ ಜನವರಿಯಿಂದ ಜುಲೈ ತಿಂಗಳವರೆಗೆ ಕೊರೊನಾ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ 49,135 ಸಾವಿನ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಗೆ ಅಂದರೆ ಜನವರಿಯಿಂದ ಜುಲೈವರೆಗೆ ಸಾವುಗಳ ಸಂಖ್ಯೆ 37,001 ಇತ್ತು. ಆದರೆ ಈ ವರ್ಷಕ್ಕೆ ಹೋಲಿಸಿದರೆ 12,136 ಜನರು ಹೆಚ್ಚುವರಿಯಾಗಿ ಸಾವಿಗೀಡಾಗಿರುವುದು ಆತಂಕಕಾರಿ ವಿಷಯವಾಗಿದೆ. ಇದು ಶೇ. 32ರಷ್ಟು ಹೆಚ್ಚಳವನ್ನು ದಾಖಲಿಸಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ ಮಾರ್ಚ್‌ನಿಂದ ಆಗಸ್ಟ್ರವರೆಗೆ 1,886 ಎಂದು ಸರ್ಕಾರ ಪ್ರಕಟಿಸಿದೆ. ಒಂದು ವೇಳೆ ಈ ಸಂಖ್ಯೆಯೇ ಅಂತಿಮವಾಗಿದ್ದರೆ ಕೊರೊನೇತರ ಸಾವುಗಳ ಸಂಖ್ಯೆ 10,250 ಹೆಚ್ಚುವರಿ ಎಂದಾಯಿತು. 49,000 ಸಾವುಗಳಲ್ಲಿ ಕೇವಲ 1,886 ಕೊರೊನಾ ಸಾವುಗಳಾಗಿದ್ದರೆ, 47,114 ಜನ ಕೊರೋನೇತರ ಕಾರಣಗಳಿಂದ ಮೃತಪಟ್ಟಿದ್ದಾರೆ. ಈ ಸಾವುಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗುವುದಕ್ಕೆ ಕಾರಣಗಳು ಏನು?. ಈ ಸಾವಿನ ಸಂಖ್ಯೆ ಮುಚ್ಚಿಡಲು ಕಾರಣಗಳೇನು? ಕೊರೊನಾ ಸಾವಿನ ಸಂಖ್ಯೆ ಕಡಿಮೆ ಪ್ರಮಾಣ ತೋರಿಸಲು ಇದು ಅಚಾತುರ್ಯ ಅಥವಾ ದುರುದ್ದೇಶದ ಪ್ರಯತ್ನವಾಗಿದೆಯೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸರ್ಕಾರ ಜನವರಿ ತಿಂಗಳಿಂದ ಇಲ್ಲಿಯವರೆಗೂ ಸಾವಿನ ಸಂಖ್ಯೆಗಳ ಲೆಕ್ಕಪರಿಶೋಧನೆ ಮತ್ತು ಸಾವಿನ ಕಾರಣಗಳ ವೈದ್ಯಕೀಯ ಪರಿಶೋಧನೆ ಮಾಡಿಯೇ ಇಲ್ಲ. ಇದರಿಂದಾಗಿ ವಾಸ್ತವಿಕವಾಗಿ ಸಾವು ಯಾವ ಕಾರಣಕ್ಕೆ ಸಂಭವಿಸಿದೆ ಎಂಬುದನ್ನು ವೈಜ್ಞಾನಿಕವಾಗಿ ಪರಿಗಣಿಸಲು ಆಗಿಲ್ಲ. ಇದರ ಜೊತೆಗೆ ಸಾವಿನ ಕಾರಣಗಳ ವೈದ್ಯಕೀಯ ಪ್ರಾಮಾಣೀಕರಣ (Medical Certification of Cause of Death- MCCD) ಮಾಡಬೇಕಿತ್ತು. ಸರ್ಕಾರ ಈ ಕುರಿತು ವಿವರಣೆ ನೀಡಬೇಕೆಂದು ಒತ್ತಾಯಿಸಿದರು.
ದೇಶದಲ್ಲಿ ಮೃತರ ಸಂಖ್ಯೆ ದಶಲಕ್ಷಕ್ಕೆ 42 ಇದ್ದರೆ, ಕರ್ನಾಟಕದಲ್ಲಿ ದಶಲಕ್ಷಕ್ಕೆ 83 ತಲುಪಿದೆ. ಸರ್ಕಾರ ಸರಿಯಾದ ಅಂಕಿ-ಅಂಶ ಪ್ರಾಮಾಣಿಕವಾಗಿ ಜನತೆ ಜೊತೆಗೆ ಹಂಚಿಕೆ ಮಾಡಿಕೊಳ್ಳಲಿಲ್ಲ. ಸಾವಿನ ಸಂಖ್ಯೆ ಈ ಪ್ರಮಾಣದ ಹೆಚ್ಚಳ ಕುರಿತ ತ್ವರಿತ ಅಧ್ಯಯನದ ವರದಿ ಪಡೆಯಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಿನಿಮಾರಂಗದಲ್ಲಿ ಡ್ರಗ್ಸ್ ವಿಚಾರ ಹರಿದಾಡುತ್ತಿರುವ ಕುರಿತು ಮಾತನಾಡಿದ ಅವರು, ಸಿನಿಮಾ ರಂಗದಿಂದ ಡ್ರಗ್ಸ್ ಪ್ರಕರಣ ಕೇಳಿಬಂದಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಇದನ್ನು ಮಟ್ಟಹಾಕುವ ಕೆಲಸವನ್ನು ಸರ್ಕಾರ ಮಾಡಬೇಕು. ಯಾರು ಎಷ್ಟೇ ದೊಡ್ಡವರಿರಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.