ಬೆಂಗಳೂರು : ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ದುರಾಡಳಿತದ ವಿರುದ್ಧ ಹೋರಾಡುತ್ತಿರುವ ನಮ್ಮ ನಾಯಕರ ಕೈ ಬಲಪಡಿಸುವ ಬದಲು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವುದು ಸಮಂಜಸವಲ್ಲ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾ ಗಾಂಧಿಯವರ 103 ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಾಯಕತ್ವದ ಕುರಿತು ಕಾಂಗ್ರೆಸ್ ನಾಯಕರಿಂದ ಕೇಳಿ ಬರುತ್ತಿರುವ ಅಪಸ್ವರಗಳನ್ನು ಖಂಡಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತ ತಕ್ಷಣ, ಅದಕ್ಕೆ ರಾಹುಲ್ ಗಾಂಧಿ ಕಾರಣ ಎಂದು ಯಾರೂ ಹೇಳಬಾರದು. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಆರೆಸ್ಸೆಸ್ ಹಾಗೂ ಕೋಮುವಾದಿಗಳ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಈ ಸಂದರ್ಭ ಅವರ ಕೈ ಬಲಪಡಿಸುವ ಪ್ರಯತ್ನ ಎಲ್ಲರೂ ಮಾಡಬೇಕು. ನಾಯಕತ್ವ ಬದಲಾವಣೆ ಒಂದೇ ಪರಿಹಾರವಲ್ಲ. ಈಗಿರುವ ನಾಯಕರ ಕೈ ಬಲಪಡಿಸಿದರೆ ಪಕ್ಷ ಸದೃಢವಾಗುವ ಅವಕಾಶ ಇದೆ ಎಂದರು.
ಸೋತಾಗ ನಮ್ಮ ಜೊತೆ ಯಾರು ಹೇಗಿದ್ದಾರೆ ಎಂದು ನೋಡೋರೆ ಮುಖ್ಯ. ನಾವು ಜೀವಂತವಾಗಿ ಉಳಿಬೇಕು ಅಂದ್ರೆ, ಆರೆಸ್ಸೆಸ್ ವಿರುದ್ಧ ಹೋರಾಟ ಮಾಡಲೇ ಬೇಕಾಗಿದೆ. ದೇಶಾದ್ಯಂತ ಕೋವಿಡ್ ನಿಯಮಾವಳಿ ಜಾರಿಯಲ್ಲಿರುವ ಹಿನ್ನೆಲೆ, ಯಾವುದೇ ಸಭೆ ದೊಡ್ಡ ಮಟ್ಟದ ಸಮಾವೇಶ ನಡೆಸುವಂತಿಲ್ಲ. ಹೀಗಾಗಿ, ಅನಿವಾರ್ಯವಾಗಿ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಇದನ್ನೇ ಕಾರಣವಾಗಿಟ್ಟುಕೊಂಡು ಕೆಲ ನಾಯಕರು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ ಎಂದರು.
ಖರ್ಗೆ ಬೆಂಬಲಿಸಿದ ಸಿದ್ದರಾಮಯ್ಯ :
ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮಾತನಾಡುವ ವೇಳೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಸಮರ್ಥಿಸಿಕೊಂಡರು. ನಮ್ಮಲ್ಲೇ ಕೆಲವರು ಗುಸುಗುಸುಗಳಿದ್ದಾರೆ, ನಮ್ಮಲ್ಲಿ ಕ್ಲಾರಿಟಿ ಇಲ್ಲದಿದ್ರೆ ಪಕ್ಷ ಕಟ್ಟೋಕೆ ಆಗಲ್ಲ. ಬಹಳ ಮಂದಿಗೆ ಸಿದ್ಧಾಂತಗಳ ಬಗ್ಗೆ ಕ್ಲಾರಿಟಿ ಇಲ್ಲ. ನಾನು ಹೆಸರನ್ನ ಹೇಳೋದಿಲ್ಲ, ಸುಮ್ಮನೆ ಖುಷಿಗಾಗಿ ಇಲ್ಲಿಗೆ ಬರೋದಿಲ್ಲ. ಕಾರ್ಯಕರ್ತರಲ್ಲಿ ಸ್ಪಷ್ಟತೆ ಇಲ್ಲವಾದರೆ ಪಕ್ಷ ಸಂಘಟನೆ ಕಷ್ಟ. ಪ್ರತಿಯೊಬ್ಬ ಕಾರ್ಯಕರ್ತರು, ನಾನು ಯಾವ ಪಕ್ಷದಲ್ಲಿ ಇದ್ದೇನೆ ಅದರ ತತ್ವ-ಸಿದ್ಧಾಂತ ಏನು ಎಂಬವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.