ಬೆಂಗಳೂರು : 'ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ'ಯ ಅಂಗವಾಗಿ ಇಂದು ಬೆಳಗ್ಗೆ 10:00 ಗಂಟೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ, ಬಾಂಕ್ವೆಟ್ ಹಾಲ್‌ನಲ್ಲಿ ಭಾರತ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತ ಸಂವಿಧಾನದ ಪೀಠಿಕೆಯನ್ನು ಏಕಕಾಲದಲ್ಲಿ ಓದುವ ಕಾರ್ಯಕ್ರಮದಲ್ಲಿ ಅಧಿಕಾರಿ, ಸಿಬ್ಬಂದಿ ಹಾಜರಾಗಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಮಾಜ ಕಲ್ಯಾಣ ಸಚಿವರ ನೇತೃತ್ವದಲ್ಲಿ ಬಾಂಕ್ವೆಟ್ ಹಾಲ್‌ನಲ್ಲಿ ಭಾರತ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ನಡೆಯಲಿದೆ. ಪೀಠಿಕೆಯನ್ನು ಏಕಕಾಲದಲ್ಲಿ ಓದುವ ಕಾರ್ಯಕ್ರಮದಲ್ಲಿ ಸಚಿವಾಲಯದ ಅಧಿಕಾರಿ, ಸಿಬ್ಬಂದಿ ವರ್ಗದವರು ಇಂದು ಬೆಳಗ್ಗೆ 9.45 ಗಂಟೆಗೆ ಬಾಂಕ್ವೆಟ್ ಹಾಲ್‌ನಲ್ಲಿ ತಪ್ಪದೇ ಹಾಜರಿರುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ವಿಧಾನಸೌಧದಲ್ಲಿ ಮೊನ್ನೆಯ ದಿನ ಸುದ್ದಿಗೋಷ್ಠಿ ನಡೆದಿದ್ದು, ಆ ವೇಳೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ ಈ ಕಾರ್ಯಕ್ರಮ ಮತ್ತು ಸಂವಿಧಾನದ ಮಹತ್ವದ ಬಗ್ಗೆ ಮಾತನಾಡಿದ್ದರು. 'ಭಾರತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಹಾಗಾಗಿ ಇದು ಉಪಯೋಗವಾಗಲಿದೆ. ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವಿಕೆ, ಮಕ್ಕಳಲ್ಲಿ ಸಂವಿಧಾನದ ಉದ್ದೇಶ ಅರ್ಥ ಆಗಬೇಕು. ಹಾಗಾಗಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ' ಎಂದಿದ್ದರು.
ಮೂಲಭೂತ ಹಕ್ಕುಗಳು ಎಲ್ಲರಿಗೂ ಗೊತ್ತಿದೆ. ಆದರೆ ಕರ್ತವ್ಯಗಳನ್ನು ಯಾರು ಪಾಲಿಸುತ್ತಿಲ್ಲ. ಹಾಗಾಗಿಯೇ ಈ ಕಾರ್ಯಕ್ರಮ ತಂದಿದ್ದೇವೆ. ಆನ್ಲೈನ್ ಮೂಲಕ ರಿಜಿಸ್ಟ್ರೇಷನ್ ಆಗಿದೆ. ಸುಮಾರು ಎರಡು ಕೋಟಿ ಜನ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇದು ಒಂದು ದೊಡ್ಡ ಆಂದೋಲನವಾಗಬೇಕು. ಎಲ್ಲ ಕಡೆಯೂ ಇದನ್ನು ಬಳಸಬೇಕು ಎಂದು ಹೇಳಿದ್ದರು.
ಹಾಗೆ ಪ್ರಜಾಪ್ರಭುತ್ವದ ಯಶಸ್ಸು ಪೀಠಿಕೆಯಲ್ಲಿದೆ. ಸಂವಿಧಾನದ ಪೀಠಿಕೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಎಲ್ಲರೂ ಸೋದರತೆಯಿಂದ ಬಾಳಲು ಇದು ಉಪಯೋಗ. ನಾವೇ ಒಪ್ಪಿ ನಾವೇ ಇದನ್ನು ತಂದಿದ್ದೇವೆ. ಇದು ಮುಂದಿನ ಪೀಳಿಗೆಗೆ ಅರ್ಥ ಆಗಬೇಕು. ಜಾತಿ, ಧರ್ಮಗಳ ನಡುವೆ ಸಂಘರ್ಷ ತಪ್ಪಿಸಬೇಕು. ಈ ಉದ್ದೇಶ ಇಟ್ಟುಕೊಂಡೇ ಇದನ್ನು ತರಲಾಗಿದೆ. ಸಂವಿಧಾನ ಪೀಠಿಕೆಯನ್ನು ಸುಮ್ಮನೆ ಆರ್ಡರ್ ಮಾಡಲ್ಲ. ಇದನ್ನು ಮ್ಯಾಂಡೇಟ್ ಮಾಡ್ತೇವೆ. ಕಡ್ಡಾಯವಾಗಿ ಇದನ್ನು ಓದುವಂತೆ ಮಾಡ್ತೇವೆ.
ಕೇವಲ ಶಾಲಾ ಕಾಲೇಜ್ಗೆ ಮಾತ್ರ ಅನ್ವಯ ಅಲ್ಲ, ಸರ್ಕಾರಿ ಕಚೇರಿಗಳಲ್ಲೂ ಇದು ಅನ್ವಯ. ಸಿಎಂ ಕಚೇರಿಯಲ್ಲೂ ಇದನ್ನು ಓದಬೇಕು. ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿಗಳಲ್ಲೂ ಸಂವಿಧಾನ ಪೀಠಿಕೆಯನ್ನು ಜಾರಿಗೊಳಿಸುತ್ತೇವೆ. ಇದು ಯಾವುದಕ್ಕೋ ಕೌಂಟರ್ ಅಲ್ಲ, ಸಂವಿಧಾನದಲ್ಲಿ ಎಲ್ಲರೂ ಸಮಾನರೇ. ಯಾರು ಕಡಿಮೆ ಅಲ್ಲ, ಯಾರು ಹೆಚ್ಚಿಲ್ಲ. ಹಾಗಾಗಿ ಇದನ್ನು ನಾವು ಜಾರಿಗೆ ತರುತ್ತಿದ್ದೇವೆ. ಮಕ್ಕಳಲ್ಲಿ ಯಾವುದೇ ಜಾತಿ, ಧರ್ಮ ಬರಬಾರದು. ಸಂವಿಧಾನದಲ್ಲಿ ಎಲ್ಲರೂ ಸಮಾನರೇ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆ ಫೋಟೋ ಹಾಕುತ್ತೇವೆ ಎಂದು ಹೇಳಿದ್ದರು.
ಇದನ್ನೂ ಓದಿ: ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 15 ರಂದು ಸಿಎಂ ಸಿದ್ದರಾಮಯ್ಯ ಚಾಲನೆ : ಸಚಿವ ಎಚ್ ಸಿ ಮಹದೇವಪ್ಪ