ಬೆಂಗಳೂರು: ಭಾರತ ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದ್ದು, 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದರು.
ಶುಕ್ರವಾರ ನಡೆದ ಬೆಂಗಳೂರು ತಂತ್ರಜ್ಞಾನ ಸಮಾವೇಶ ಸಮಾರೋಪದಲ್ಲಿ ಮಾತನಾಡಿದ ಅವರು, "ಕೇಂದ್ರ ಸರ್ಕಾರವು ದೊಡ್ಡ ಉದ್ಯಮಿಗಳಂತೆಯೇ ಸಣ್ಣಪುಟ್ಟ ವ್ಯಾಪಾರಿಗಳಿಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಓಪನ್ ಡೇಟಾ ಇ ಕಾಮರ್ಸ್ ವ್ಯವಸ್ಥೆಗೆ ಚಾಲನೆ ನೀಡಿದ್ದು, ಇದೂ ಸಹ ಬೆಂಗಳೂರಿನಿಂದಲೇ ಆರಂಭವಾಗಬೇಕು ಎಂದು ಆಶಿಸಿದರು.
ಬೆಂಗಳೂರಿನಲ್ಲಿ ವಾರದ ಹಿಂದಷ್ಟೇ ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆ ಲೋಕಾರ್ಪಣೆಗೊಂಡಿದೆ. ಇದಕ್ಕೆ ತಕ್ಕಂತೆ ಬೆಂಗಳೂರು ನಾಗಾಲೋಟದಿಂದ ಮುನ್ನಡೆಯುತ್ತಿದೆ. ಎರಡು ದಶಕಗಳ ನಂತರ ಇದೇ ಮೊದಲ ಬಾರಿಗೆ ಭಾರತಕ್ಕೆ ಜಿ-20 ಗುಂಪಿನ ನೇತೃತ್ವ ಸಿಕ್ಕಿದೆ. ಡಿ.1ರಂದು ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದು, ಇದು ಭಾರತದ ಶಕ್ತಿ ಪ್ರದರ್ಶನಕ್ಕೆ ಸುವರ್ಣಾವಕಾಶವಾಗಿದೆ ಎಂದರು.
ಇದನ್ನೂ ಓದಿ: 25ನೇ ಬೆಂಗಳೂರು ತಂತ್ರಜ್ಞಾನ ಸಮಾವೇಶ: ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತಾ ನೀತಿ ಬಿಡುಗಡೆ
ಕೋವಿಡ್ ಪಿಡುಗಿಗೆ ಸಿಲುಕಿ ಮುಂದುವರೆದ ದೇಶಗಳು ಕೂಡ ಹಣದುಬ್ಬರದಿಂದ ನಲುಗುತ್ತಿವೆ. ಆದರೆ, ಭಾರತದಲ್ಲಿ ಕೇವಲ ಶೇಕಡಾ 6.8 ರಷ್ಟು ಹಣದುಬ್ಬರ ಮಾತ್ರವೇ ಇದ್ದು, ಸಂಪೂರ್ಣ ನಿಯಂತ್ರಣದಲ್ಲಿದೆ. ಕಳೆದ ಎಂಟು ವರ್ಷಗಳಲ್ಲಿ ದೇಶದ ಆರ್ಥಿಕ ಸಂರಚನೆಯಲ್ಲಿ ಮಾಡಿರುವ ಮೂಲಭೂತ ಬದಲಾವಣೆಗಳೇ ಇದಕ್ಕೆ ಕಾರಣ ಎಂದು ಗೋಯಲ್ ಪ್ರತಿಪಾದಿಸಿದರು.
ಇದನ್ನೂ ಓದಿ: ಬೆಂಗಳೂರು ಟೆಕ್ ಸಮಿಟ್‌ನಿಂದ ದೇಶದ ಪ್ರಗತಿಗೆ ಇನ್ನಷ್ಟು ಕೊಡುಗೆ: ಪ್ರಧಾನಿ ಮೋದಿ
ಕೋವಿಡ್ ಬಳಿಕ ಸ್ಟಾರ್ಟ್ಅಪ್ಗಳು ಭಾರತದ ಆರ್ಥಿಕತೆಗೆ ಬೂಸ್ಟರ್ ಡೋಸ್ ಕೊಡುತ್ತಿದೆ. ಅನೇಕ ದೇಶಗಳು ಹಣದುಬ್ಬರ, ಆರ್ಥಿಕ ಕುಸಿತ ಕಾಣುತ್ತಿದೆ. ಆದರೆ ನಮ್ಮ ಯುವ ಉದ್ಯಮಿಗಳು ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ತುತ್ತಿದ್ದಾರೆ. ನಮ್ಮಲ್ಲಿ 6.8% ಹಣದುಬ್ಬರ ಇದ್ದು, ನಿಯಂತ್ರಣದಲ್ಲಿದೆ. ದೇಶದ ಅಭಿವೃದ್ಧಿಯಲ್ಲಿ ಬೆಂಗಳೂರು ದೊಡ್ಡ ಪಾತ್ರ ವಹಿಸಲಿದೆ. ತಂತ್ರಜ್ಞಾನ, ಆವಿಷ್ಕಾರ, ಸ್ಟಾರ್ಟ್ಅಪ್ಗಳ ಸಮಸ್ಯೆ ಪರಿಹಾರಕ್ಕೆ ಭಾರತಕ್ಕೆ ಜಾಗತಿಕ ಸವಾಲು ಎದುರಿಸುವ ಶಕ್ತಿ ನೀಡಿದೆ. ನಿಮ್ಮ ಆವಿಷ್ಕಾರಗಳು ಅನೇಕ ಅಚ್ಚರಿಗಳನ್ನು ಸೃಷ್ಟಿಸಬಹುದು ಎಂದರು.