ಬೆಂಗಳೂರು : ವಿಶ್ವದಲ್ಲೇ ಗರಿಷ್ಠ ಕೋವಿಡ್ ಲಸಿಕೆ ನೀಡಿದ ದೇಶವಾಗಿ ಭಾರತ ಹೊರ ಹೊಮ್ಮಿದೆ. ದೇಶದಾದ್ಯಂತ ಒಟ್ಟು 32.66 ಕೋಟಿ ಜನರಿಗೆ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಲಸಿಕೆ ಆಂದೋಲನದಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕುವ ಮೂಲಕ ಸಾಧನೆ ಮಾಡಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ರಾಜ್ಯ ಮಟ್ಟದ “ಇ ಚಿಂತನಾ ಸಭೆ”ಯಲ್ಲಿ “ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು” ಕುರಿತು ಮಾತನಾಡಿದ ಅವರು, ಹಿಂದೆ ದೇಶದಲ್ಲಿ ಏಳು ರೆಮಿಡಿಸಿವಿರ್ ಉತ್ಪಾದನಾ ಘಟಕಗಳಿದ್ದವು. ನರೇಂದ್ರ ಮೋದಿ ಅವರ ವಿಶೇಷ ಮುತುವರ್ಜಿಯ ಕಾರಣ ಮತ್ತು ಔಷಧ ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದರಿಂದ ಈಗ ರೆಮಿಡಿಸಿವಿರ್ ಉತ್ಪಾದನಾ ಘಟಕಗಳ ಸಂಖ್ಯೆ 17ಕ್ಕೆ ಏರಿದೆ. ಕೋವಿಡ್‍ನ ಸಮರ್ಥ ನಿರ್ವಹಣೆಗೆ ಇದು ಸಹಕರಿಸಿದೆ ಎಂದು ತಿಳಿಸಿದರು.
ಹೊಸ ಘಟಕಗಳು ಕಾರ್ಯ ಪ್ರವೃತ್ತ : ಆಮ್ಲಜನಕ ಉತ್ಪಾದನಾ ಘಟಕಗಳ ಹೆಚ್ಚಳಕ್ಕೂ ಆದ್ಯತೆ ಕೊಡಲಾಗಿದೆ. ದೇಶದಲ್ಲಿ ಹಿಂದೆ 100 ಆಮ್ಲಜನಕ ಉತ್ಪಾದನಾ ಘಟಕಗಳಿದ್ದವು. ಈಗ ಹೊಸದಾಗಿ 2,200 ಹೊಸ ಘಟಕಗಳು ಕಾರ್ಯ ಪ್ರವೃತ್ತವಾಗುತ್ತಿವೆ. ಆಮ್ಲಜನಕ ಸರಬರಾಜು ಸಮಸ್ಯೆ ಆಗಬಾರದೆಂಬ ದೃಷ್ಟಿಯಿಂದ ಹಲವೆಡೆ ವೈಮಾನಿಕ ಸರಬರಾಜು ನಡೆದಿದೆ. ಇನ್ನೂ ಹಲವು ಕಡೆ ರೈಲಿನ ಮೂಲಕ ಸರಬರಾಜು ಮಾಡಲಾಗಿದೆ. ರಸ್ತೆ, ರೈಲು, ವಿಮಾನ ಸೇರಿ ಎಲ್ಲಾ ಲಭ್ಯ ಮಾರ್ಗಗಳನ್ನು ಭಾರತ ಬಳಸಿಕೊಂಡು ಜನರಿಗೆ ತೊಂದರೆ ಆಗದಂತೆ ನೋಡಿಕೊಂಡಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರವು ನಿರಂತರವಾಗಿ ಸ್ಪಂದಿಸಿದೆ : ಕೋವಿಡ್ 2ನೇ ಅಲೆಯನ್ನು ನಿಭಾಯಿಸಲಾಗದೆ ಹಲವು ದೇಶಗಳು ಕೈಚೆಲ್ಲುವ ಪರಿಸ್ಥಿತಿ ಬಂದಿತ್ತು. ಆದರೆ, ಭಾರತವು ಇದನ್ನು ಸವಾಲಾಗಿ ತೆಗೆದುಕೊಂಡಿತು. ನರೇಂದ್ರ ಮೋದಿ ನೇತೃತ್ವದಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಔಷಧಿ, ಆಮ್ಲಜನಕ, ವೆಂಟಿಲೇಟರ್ಗಳನ್ನು ವ್ಯಾಪಕವಾಗಿ ಒದಗಿಸಲಾಗಿದೆ. ರಾಜ್ಯ ಸರ್ಕಾರಗಳ ಅಗತ್ಯಗಳಿಗೆ ಕೇಂದ್ರ ಸರ್ಕಾರವು ನಿರಂತರವಾಗಿ ತಕ್ಷಣವೇ ಸ್ಪಂದಿಸಿದೆ ಎಂದು ತಿಳಿಸಿದರು.
ಅಪಪ್ರಚಾರ ಮುಂದುವರಿಸಿವೆ : ವಿರೋಧ ಪಕ್ಷಗಳು ಮಾಡುವ ಅಪಪ್ರಚಾರಕ್ಕೆ ತಮ್ಮ ಕಾರ್ಯದ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಿದೆ. ಆಮ್ಲಜನಕ, ರೆಮಿಡಿಸಿವಿರ್, ಬೆಡ್ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮೂಲಸೌಕರ್ಯದ ಕೊರತೆ ಆಗದಂತೆ ಸಕಾಲದಲ್ಲಿ ವ್ಯವಸ್ಥೆ ಮಾಡಿದೆ. ಆದರೆ, ವಿಪಕ್ಷಗಳು ವಿರೋಧಕ್ಕಾಗಿಯೇ ಅಪಪ್ರಚಾರ ಮುಂದುವರಿಸಿವೆ ಎಂದರು.
10 ಲಕ್ಷ ರೂಪಾಯಿಯ ಬಾಂಡ್ ನೀಡುತ್ತಿದೆ : ಜಗತ್ತಿನಲ್ಲಿ ಅತಿ ಹೆಚ್ಚು ಕೋವಿಡ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ. ತ್ವರಿತವಾಗಿ ವ್ಯಾಕ್ಸಿನ್ ನೀಡಲು ಸರ್ಕಾರ ಬದ್ಧವಾಗಿದೆ. ಜೂನ್ 21ರಿಂದ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ನೀಡುವ ಯೋಜನೆಗೆ ಚಾಲನೆ ಕೊಡಲಾಗಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿ ನೀಡುವ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಇದಲ್ಲದೆ, ಕೋವಿಡ್‍ನಿಂದ ಪೋಷಕರು ಮೃತಪಟ್ಟ ಕಾರಣಕ್ಕೆ ಅನಾಥರಾದ ಕುಟುಂಬದ ಮಕ್ಕಳಿಗೆ ಕೇಂದ್ರ ಸರ್ಕಾರವು 10 ಲಕ್ಷ ರೂಪಾಯಿಯ ಬಾಂಡ್ ನೀಡುತ್ತಿದೆ ಎಂದು ಅವರು ವಿವರಿಸಿದರು.
ಕಾರ್ಯಕರ್ತರನ್ನು ತರಬೇತಿಗೊಳಿಸಲಾಗುತ್ತಿದೆ : ರಾಜ್ಯದಲ್ಲಿ ಆರೋಗ್ಯ ಸಮಸ್ಯೆ ನಿವಾರಣೆಗೆ ನೆರವಾಗುವ ದೃಷ್ಟಿಯಿಂದ ಫ್ರಂಟ್‍ಲೈನ್ ವಾರಿಯರ್ಗಳಾಗಿ ಬಿಜೆಪಿ ಕಾರ್ಯಕರ್ತರನ್ನು ತರಬೇತಿಗೊಳಿಸಲಾಗುತ್ತಿದೆ. ಕರ್ನಾಟಕದಿಂದ 1.20 ಲಕ್ಷ ಕಾರ್ಯಕರ್ತರನ್ನು ಸಿದ್ಧಪಡಿಸಲಾಗುವುದು ಎಂದರು. ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಮಂಗಳೂರಿನಿಂದ ವೆಬೆಕ್ಸ್ ಮೂಲಕ ಭಾಗವಹಿಸಿ ಅಧ್ಯಕ್ಷತೆ ವಹಿಸಿದ್ದರು.
ಓದಿ: ಪ್ರಧಾನಿ ನರೇಂದ್ರ ಮೋದಿ ಈ ದೇಶಕ್ಕೆ ಸ್ಲೋ ಪಾಯಿಸನ್ ನೀಡುತ್ತಿದ್ದಾರೆ : ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ