ಬೆಂಗಳೂರು: ಫ್ಲಾಟ್ ಖರೀದಿದಾರರಿಗೆ ಅನುಕೂಲವಾಗುವಂತೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನ ಜಾರಿಗೆ ತರಲಾಗಿದೆ. ಆದರೆ, ಹಲವು ಬಿಲ್ಡರುಗಳು, ನಿಯಮದಂತೆ ಸಕಾಲದಲ್ಲಿ ಗ್ರಾಹಕರಿಗೆ ಮುಂಗಡ ಹಣ ಮರಳಿಸದೆ ಸತಾಯಿಸುತ್ತಿದ್ದಾರೆ. ಅದಕ್ಕಾಗಿ ವಿಚಕ್ಷಣಾ ದಳ ರಚಿಸಲು ರೇರಾ ಮುಂದಾಗಿದೆ.
2017, ಮೇ ತಿಂಗಳಿಂದ ಎಲ್ಲಾ ಹೊಸ ರಿಯಲ್ ಎಸ್ಟೇಟ್ ಯೋಜನೆಗಳು, ಪ್ರಗತಿಯಲ್ಲಿನ ಯೋಜನೆಗಳು ಕಡ್ಡಾಯವಾಗಿ ರೇರಾ ಕರ್ನಾಟಕದಲ್ಲಿ ನೋಂದಣಿ ಮಾಡಬೇಕಾಗಿದೆ. ರೇರಾ ಕಾಯಂ ಪ್ರಾಧಿಕಾರ ರಚನೆಯಾಗಿರುವುದರಿಂದ ಇದೀಗ ಇನ್ನಷ್ಟು ಹೆಚ್ಚು ಯೋಜನೆಗಳನ್ನು ರೇರಾದಡಿ ತರಲು ಮುಂದಾಗಿದೆ. ಈವರೆಗೆ ಒಟ್ಟು 3,153 ಬಿಲ್ಡರ್ಗಳು ರೇರಾ ಕರ್ನಾಟಕದಡಿ ನೋಂದಣಿಗೆ ಅನ್ವಯಿಸಿ ಅರ್ಜಿ ಹಾಕಿದ್ದಾರೆ. ಈಗಾಗಲೇ ಒಟ್ಟು 2,539 ಯೋಜನೆಗಳು ಅನುಮೋದನೆಗೊಂಡಿವೆ. ಸುಮಾರು 180 ಅರ್ಜಿಗಳು ತಿರಸ್ಕೃತಗೊಂಡಿವೆ.
ರೇರಾ ಆದೇಶಕ್ಕೂ ಬಿಲ್ಡರ್ಗಳು ಡೋಂಟ್ ಕೇರ್:
ಇತ್ತ ರೇರಾದಡಿ ಹಲವು ಯೋಜನೆಗಳನ್ನು ನೋಂದಾಯಿಸಿಕೊಂಡಿದ್ದಾರೆ. ಆದರೆ, ಬಿಲ್ಡರ್ಗಳು ರೇರಾ ನಿಯಮವನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಂಬಂಧ ಗ್ರಾಹಕರಿಂದ ರೇರಾಗೆ ದೂರುಗಳ ಮಹಾಪೂರವೇ ಹರಿದು ಬರುತ್ತಿವೆ. ರೇರಾ ಆದೇಶ ನೀಡಿದರೂ ಬಿಲ್ಡರ್ಗಳು ಗ್ರಾಹಕರಿಂದ ಪಡೆದ ಮುಂಗಡ ಹಣ ನೀಡಲು ವಿಳಂಬ ಮಾಡುತ್ತಿದ್ದಾರೆ. ಜತೆಗೆ ಫ್ಲಾಟ್ಗಳನ್ನು ಸಕಾಲದಲ್ಲಿ ಗ್ರಾಹಕರ ವಶಕ್ಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಸಂಬಂಧ ರೇರಾ ಈಗಾಗಲೇ ಸುಮಾರು 900 ಕ್ಕೂ ಹೆಚ್ಚು ಆದೇಶ ಹೊರಡಿಸಿದೆ. ಆದರೆ, ಬಿಲ್ಡರುಗಳು ಮಾತ್ರ ರೇರಾ ಆದೇಶಕ್ಕೆ ಕ್ಯಾರೇ ಅನ್ನುತ್ತಿಲ.
ಶೀಘ್ರದಲ್ಲಿ ವಿಚಕ್ಷಣಾ ದಳ ರಚನೆ:
ರೇರಾ ಆದೇಶ ಉಲ್ಲಂಘನೆ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಶೀಘ್ರದಲ್ಲೇ ವಿಚಕ್ಷಣಾ ದಳ ರಚಿಸಲಾಗುವುದು ಎಂದು ರೇರಾ ಪ್ರಾಧಿಕಾರದ ಅಧ್ಯಕ್ಷ ಎಂ.ಆರ್.ಕಾಂಬ್ಳೆ ತಿಳಿಸಿದ್ದಾರೆ. ವಿಚಕ್ಷಣಾ ದಳಕ್ಕೆ ಪೊಲೀಸ್ ಅಧಿಕಾರ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಈ ಮೂಲಕ ರೇರಾ ಆದೇಶ ಉಲ್ಲಂಘನೆ ಮಾಡುವ ಬಿಲ್ಡರ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ.
ಕಪ್ಪುಪಟ್ಟಿಗೆ ಸೇರಿಸಲು ಮೀನಾಮೇಷ?:
ಇತ್ತ ನೋಂದಣಿ ಮಾಡದ ಬಿಲ್ಡರ್ಗಳನ್ನ ಕಪ್ಪುಪಟ್ಟಿಗೆ ಸೇರಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಕಳೆದ ವರ್ಷ ಯು.ಟಿ.ಖಾದರ್ ವಸತಿ ಸಚಿವರಾಗಿದ್ದಾಗ, ನಿಯಮ ಮೀರಿದ ಬಿಲ್ಡರ್ಗಳನ್ನ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಿದ್ದರು. ಸುಮಾರು 910 ಬಿಲ್ಡರ್ಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಮುಂದಾಗಿದ್ದೇವೆ ಎಂದು ತಿಳಿಸಿದ್ದರು. ಆದರೆ, ಇದುವರೆಗೆ ಯಾವುದೇ ಬಿಲ್ಡರ್ಗಳನ್ನು ಕಪ್ಪು ಪಟ್ಟಿಗೆ ಸೇರಿಸಿಲ್ಲ. ಇದೀಗ ನಿಯಮ ಉಲ್ಲಂಘಿಸುವ ಬಿಲ್ಡರುಗಳನ್ನು ಕಪ್ಪು ಪಟ್ಟಿ ಸೇರಿಸುವ ಚಿಂತನೆಯನ್ನು ರೇರಾ ಕೈ ಬಿಟ್ಟಿದ್ದು, ಸದ್ಯ ಈ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.