ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ.
ಇಂದು ಮಧ್ಯಾಹ್ನ 1.30 ಕ್ಕೆ ವಿಧಾನಸೌಧದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಕೈಗೊಳ್ಳಲಾಗಿರುವ ಕ್ರಮಗಳು ಹಾಗೂ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಂದ ಸಿಎಂ ಮಾಹಿತಿ ಪಡೆದು ಅಲ್ಲಿನ ಅಗತ್ಯತೆಗಳು, ಬೇಡಿಕೆಗಳ ಕುರಿತು ಮಾಹಿತಿ ಪಡೆದು ಚರ್ಚೆ ನಡೆಸಲಿದ್ದಾರೆ.
ಕೆಲವು ಕಡೆ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಬೆಲೆಯನ್ನು ದುಪ್ಪಟ್ಟು ಮಾಡಿರುವ ಆರೋಪ ಕೇಳಿಬಂದಿದ್ದು, ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ವಿಶೇಷವಾಗಿ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಕುರಿತು ಮಹತ್ವದ ಚರ್ಚೆ ನಡೆಯಲಿದೆ.
ಸದನದಲ್ಲಿ ಉಭಯ ಇಲಾಖೆ ಸಚಿವರ ನಡುವೆ ಸಮನ್ವಯತೆ ಇಲ್ಲ ಎನ್ನುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಯಲಿದೆ.
ಈವರೆಗೂ ಸೋಂಕಿತರ ಸಂಖ್ಯೆ11 ತಲುಪಿದ್ದು, ಓರ್ವ ವ್ಯಕ್ತಿ ಮಾತ್ರ ಮೃತಪಟ್ಟಿದ್ದಾರೆ. ಸದ್ಯದ ಮಟ್ಟಿಗೆ ಕೊರೊನಾ ನಿಯಂತ್ರಣದಲ್ಲಿದೆ ಎಂಬಂತೆ ಕಂಡುಬಂದರೂ ನಿರ್ಲಕ್ಷ್ಯ ವಹಿಸಿದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇದ್ದು, ಮತ್ತಷ್ಟು ಪರಿಣಾಮಕಾರಿಯಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ.
ಇನ್ನು, ಹವಾನಿಯಂತ್ರಿತ ವ್ಯವಸ್ಥೆ ಇರುವ ಸ್ಥಳದಲ್ಲಿ ಕೊರೊನಾ ವೈರಸ್ ಹೆಚ್ಚು ಸಮಯ ಇದ್ದು ವ್ಯಕ್ತಿಗಳಿಗೆ ಹರಡುವ ಸಾಧ್ಯತೆ ಇದೆ ಎನ್ನುವ ಆರೋಗ್ಯ ಇಲಾಖೆ ಮಾಹಿತಿ ಮೇರೆಗೆ ರೆಸ್ಟೊರೆಂಟ್ ಗಳ ಎಸಿ ಸೇವೆಗೆ ಬ್ರೇಕ್ ಹಾಕಲಾಗಿದೆ. ಹವಾನಿಯಂತ್ರಿತ ವ್ಯವಸ್ಥೆಯಲ್ಲೇ ಕಲಾಪ ನಡೆಸುತ್ತಿದೆ. ಸಭಾಂಗಣ, ಮೊಗಸಾಲೆಗಳಲ್ಲಿ ನಿರಂತರವಾಗಿ ಎಸಿ ಬಳಸಲಾಗುತ್ತಿದೆ ಇದರಿಂದ ಸಮಸ್ಯೆಯಾಗಲಿದೆ ಎನ್ನುವ ಚರ್ಚೆ ಈಗಾಗಲೇ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ನಡೆಯುತ್ತಿದ್ದು, ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದು ವೇಳೆ ಕಲಾಪ ಮುಂದೂಡುವುದೇ ವಾಸಿ ಎಂದು ಸಂಪುಟ ಸಭೆಯಲ್ಲಿ ತೀರ್ಮಾನಕ್ಕೆ ಬಂದರೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ವಿಷಯವನ್ನು ಸಿಎಂ ಪ್ರಸ್ತಾಪ ಮಾಡಲಿದ್ದಾರೆ ಎನ್ನಲಾಗ್ತಿದೆ.