ಬೆಂಗಳೂರು: ಬಿಹಾರ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರದ ಮೇಲೂ ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಡ ಹೆಚ್ಚಾಗಿದೆ. ಸ್ವತಃ ಕಾಂಗ್ರೆಸ್ ನಾಯಕರೇ ಅದರಲ್ಲೂ ಹಿಂದುಳಿದ ವರ್ಗಗಳ ಕೈ ನಾಯಕರು ವರದಿ ಬಿಡುಗಡೆಗೆ ಒತ್ತಡ ಹೇರುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಈ ಹಿಂದಿನ ಅಧಿಕಾರಾವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜು ಅವರಿಗೆ ಜಾತಿ ಗಣತಿ ಮಾಡಲು ನಿರ್ದೇಶಿಸಿದ್ದರು. ಅದರಂತೆ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ) ವರದಿ ಸಿದ್ಧಪಡಿಸಿದ್ದರು. ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಎಚ್ ಕಾಂತರಾಜು ಆಯೋಗದ ವರದಿಯು ಸಿದ್ಧಗೊಂಡಿತ್ತು. ಆದರೆ, ರಾಜಕೀಯ ಕಾರಣಕ್ಕೆ ವರದಿ ಇನ್ನೂ ಬಹಿರಂಗಗೊಂಡಿಲ್ಲ.
ಹಿಂದಿನ ಸರ್ಕಾರಗಳು ವರದಿ ಸ್ವೀಕರಿಸುವ ಮನಸ್ಸು ಮಾಡಲಿಲ್ಲ. ಇದೀಗ ಬಿಹಾರ ಸರ್ಕಾರ ಅಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಮಾಡಿರುವ ಹಿನ್ನೆಲೆ ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಾಯ ಕೇಳಿ ಬರುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ವರದಿ ಬಿಡುಗಡೆ ಮಾಡುವುದಾಗಿ ಹಲವು ಬಾರಿ ತಿಳಿಸಿದ್ದಾರೆ. ಈ ಸಂಬಂಧ ಹಿಂದುಳಿದ ವರ್ಗಗಳ ಆಯೋಗಕ್ಕೂ ಜಾತಿ ಗಣತಿ ವರದಿ ಸಿದ್ಧಪಡಿಸಲು ಸೂಚಿಸಿದ್ದಾರೆ.
ಕೈ ನಾಯಕರಿಂದ ವರದಿ ಬಿಡುಗಡೆಗೆ ಒತ್ತಾಯ: ಹಿಂದುಳಿದ ವರ್ಗಕ್ಕೆ ಸೇರಿದ ಕೈ ನಾಯಕರು ಸಿಎಂ ಸಿದ್ದರಾಮಯ್ಯಗೆ ಬಿಹಾರದಂತೆ ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್ ಎಕ್ಸ್ ಮೂಲಕ ಪೋಸ್ಟ್ ಮಾಡಿ ಜಾತಿ ಗಣತಿ ವರದಿ ಬಿಡುಗಡೆ ಮಾಡಲು ಆಗ್ರಹಿಸಿದ್ದಾರೆ. ಜಾತಿ ಗಣತಿ ಬಹಿರಂಗ ಪಡಿಸುವ ಕುರಿತು ಹಾಗೂ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯದ ವಿರುದ್ಧ ನಮ್ಮ ನಾಯಕ ರಾಹುಲ್ ಗಾಂಧಿ ಧ್ವನಿ ಎತ್ತಿದ್ದಾರೆ. ಬಿಹಾರ ಸರ್ಕಾರದಂತೆ ಕರ್ನಾಟಕ ಸರ್ಕಾರವೂ ಕೂಡ ರಾಜ್ಯದಲ್ಲಿ ಈಗಾಗಲೇ ಸಿದ್ಧವಾಗಿರುವ ಹಿಂದುಳಿದ ವರ್ಗಗಳ ಜಾತಿ ವರದಿಯನ್ನು ಬಹಿರಂಗ ಪಡಿಸುವ ದಿಟ್ಟತನ ತೋರಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಅದೇ ರೀತಿ ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜ ರಾಯರೆಡ್ಡಿ ಕೂಡ ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ನ ಹಿಂದುಳಿದ ಸಮುದಾಯದ ಸಚಿವರು ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಾಯ ಮಾಡುತ್ತಿದ್ದಾರೆ.
ಜಾತಿ ಗಣತಿ ವರದಿ ವಿವಾದ ಏನು?: 2015ರಲ್ಲಿ ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕುರುಬ ಸಮುದಾಯದ ಎಚ್.ಕಾಂತರಾಜು ಅವರನ್ನು ನೇಮಿಸಿ ಸಮೀಕ್ಷೆ ನಡೆಸಿತ್ತು. 2019ರ ವೇಳೆಗೆ ವರದಿ ಸಿದ್ಧವಾಗಿದ್ದರೂ ಆಯೋಗದ ಸದಸ್ಯ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಸಹಿ ಹಾಕದ ಕಾರಣ ಸರ್ಕಾರ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ವರದಿ ಬಿಡುಗಡೆಯಾಗದೇ ಹಾಗೇ ಉಳಿದುಕೊಂಡಿದೆ.
6 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಒಳಗೊಂಡಿರುವ 1.35 ಕೋಟಿ ಕುಟುಂಬಗಳನ್ನು ಸಮೀಕ್ಷೆ ನಡೆಸಲಾಗಿದ್ದರೂ, ಸುಮಾರು 25-30 ಲಕ್ಷ ಜನರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ ಎಂಬ ಆರೋಪ ಜಾತಿ ಗಣತಿ ವಿರುದ್ಧದ ಪ್ರಮುಖ ಆಕ್ಷೇಪ. 2016ರಲ್ಲಿ ಕರ್ನಾಟಕದ ಜಾತಿ ಗಣತಿ ವರದಿ ಮಾಧ್ಯಮಗಳಿಗೆ ಸೋರಿಕೆ ಆಗಿತ್ತು. ಈ ಅಂಕಿ - ಅಂಶಗಳ ಪ್ರಕಾರ ರಾಜ್ಯದಲ್ಲಿ ಯಾವ ಸಮುದಾಯವನ್ನು ಈವರೆಗೆ ಬಹುಸಂಖ್ಯಾತರು ಎಂದು ಭಾವಿಸಲಾಗಿತ್ತೋ ಆ ಸಮುದಾಯ ಬಹುಸಂಖ್ಯಾತರಲ್ಲ ಅನ್ನೋ ಮಾಹಿತಿ ಇದೆ ಎನ್ನಲಾಗಿದೆ. ಅಹಿಂದ ಸಮುದಾಯದ ಬಲ ರಾಜ್ಯದಲ್ಲಿ ಹೆಚ್ಚಾಗಿದೆ ಅನ್ನೋ ಮಾಹಿತಿಯೂ ಜಾತಿ ಗಣತಿಯಲ್ಲಿ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಬಲಾಢ್ಯ ಸಮುದಾಯಗಳು ಜಾತಿ ಗಣತಿ ವರದಿ ಬಿಡುಗಡೆಗೆ ಅಡ್ಡಗಾಲು ಹಾಕಿವೆ.
ಈಗಾಗಲೇ ರಾಜ್ಯದ ಮುಂದುವರಿದ ಕೆಲ ಸಮುದಾಯಗಳು ಜಾತಿ ಗಣತಿ ವರದಿ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಕಾಂಗ್ರೆಸ್ ಪ್ರಬಲ ನಾಯಕರೂ ಕೂಡಾ ಜಾತಿ ಗಣತಿ ವರದಿ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಇದು ಸಿಎಂ ಸಿದ್ದರಾಮಯ್ಯಗೆ ವರದಿ ಬಿಡುಗಡೆಗೆ ಅಡ್ಡಗಾಲಾಗಿ ಪರಿಣಮಿಸಿದೆ. ಇದರಿಂದ ಬಲಾಢ್ಯ ಮತ ಬ್ಯಾಂಕ್ ಕಳೆದುಕೊಳ್ಳುವ ಆತಂಕ ಕೈ ನಾಯಕರದ್ದಾಗಿದೆ.
ನವೆಂಬರ್ನಲ್ಲಿ ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ: ನವೆಂಬರ್ ಒಳಗಡೆ ಬಹು ಚರ್ಚಿತ ಜಾತಿ ಗಣತಿ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ಆಯೋಗ ಎಲ್ಲ ಸಿದ್ಧತೆ ನಡೆಸಿದ್ದು, ಅಂತಿಮ ಸ್ಪರ್ಶ ನೀಡುತ್ತಿದೆ.
ಈ ಬಗ್ಗೆ ಮಾತನಾಡಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು (ಜಾತಿ ಗಣತಿ) ಸಿದ್ಧಪಡಿಸಿ ನಾವು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಇದೇ ನವೆಂವರ್ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ವರದಿಯಲ್ಲಿನ ಕೆಲವು ವಿಚಾರ ಪತ್ರಿಕೆಯಲ್ಲಿ ಬಹಿರಂಗ ಆಯ್ತು ಅಂತಾರೆ, ಅದು ಸುಳ್ಳು ವಾಸ್ತವಾಂಶ ಬೇರೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಹಾರದಲ್ಲಿ ಕೇವಲ ಜಾತಿ ಜನಗಣತಿ ಕೊಡಲಾಗಿದೆ. ಆದರೆ, ನಮ್ಮ ವರದಿಯಲ್ಲಿ ಅದಕ್ಕಿಂತ ಹೆಚ್ಚಿನ ಮಾಹಿತಿ ಇದೆ. ನಮ್ಮ ವರದಿಯಲ್ಲಿ ಸಮಯದಾಯವಾರು ಮೀಸಲಾತಿ, ಒದಗಿಸಬೇಕಿರುವ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಇದೆ. ವರದಿ ಕೊಡಿ ಅಂತ ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ, ಸರ್ಕಾರವೂ ಒತ್ತಡ ಹಾಕಿಲ್ಲ. ನಾವು ಮೊದಲಿನಿಂದಲೂ ನವೆಂಬರ್ ಒಳಗೆ ವರದಿ ಕೊಡಬೇಕು ಅಂತ ಹೇಳಿಕೊಂಡು ಬರುತ್ತಿದ್ದೇವೆ. ಅಷ್ಟರಲ್ಲಿ ನಮ್ಮ ಅವಧಿಯೂ ಮುಗಿಯುತ್ತೆ. ಹಾಗಾಗಿ ಆಗ ವರದಿ ಕೊಡ್ತೇವೆ. ರಾಜ್ಯದಲ್ಲಿ ರಾಜಕೀಯ ಸಂಚಲನ ಸೃಷ್ಟಿಸುತ್ತಾ ಅಂತ ನಾವು ಹೇಳಲು ಸಾಧ್ಯವಿಲ್ಲ. ಅದರ ಬಗ್ಗೆ ರಾಜಕೀಯ ವ್ಯಕ್ತಿಗಳು ಮಾತಾಡ್ತಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಮ್ಮ ಸರ್ಕಾರದ ಅವಧಿಯಲ್ಲಿ ಜಾತಿ ಗಣತಿ ವರದಿ ಪೂರ್ಣವಾಗಿರಲಿಲ್ಲ: ಸಿಎಂ ಸಿದ್ದರಾಮಯ್ಯ