ಬೆಂಗಳೂರು: ಕೊರೊನಾ ವಾರಿಯರ್ ಆಗಿ ಹೋರಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದಿನೇ ದಿನೆ ಹೆಚ್ಚುತ್ತಿದೆ. ಇದೀಗ ಕೋರಮಂಗಲದಲ್ಲಿ ನಿಯೋಜನೆಯಾಗಿರುವ ಕೆಎಸ್ಆರ್ಪಿಯ ನಾಲ್ಕನೇ ಪಡೆಯ 6 ಜನ ಪೊಲೀಸ್ ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಮುಂಜಾಗ್ರತ ಕ್ರಮವಾಗಿ 58 ಜನ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಕೆಎಸ್ಆರ್ಪಿ 4ನೇ ಪಡೆಯಲ್ಲಿ ಒಟ್ಟು 11 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೆಎಸ್ಆರ್ಪಿ ಸಿಬ್ಬಂದಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದೀಗ ಇವರ ಜವಾಬ್ದಾರಿ ಹೊತ್ತಿರುವ ಎಡಿಜಿಪಿ ಅಲೋಕ್ ಕುಮಾರ್ ಕೆಎಸ್ಆರ್ಪಿ ತುಕಡಿಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಕೆಎಸ್ಆರ್ಪಿ ತುಕಡಿ ಸಿಬ್ಬಂದಿ ಕಂಟೈನ್ಮೆಂಟ್ ಪ್ರದೇಶಗಳಿಗೆ ತೆರಳಿ ಭದ್ರತೆಯನ್ನ ನೋಡಿಕೊಳ್ತಾರೆ. ಒಂದು ವಾರ ಕಾಲ ಅದೇ ಸ್ಥಳದಲ್ಲಿ ವಾಸ್ತವ್ಯ ಮಾಡ್ತಾರೆ. ಸೋಂಕು ದೃಢಪಟ್ಟಿರುವ 11 ಜನ ಕೂಡ ಪಾದರಾಯನಪುರ ಸೇರಿದಂತೆ ಕಂಟೈನ್ಮೆಂಟ್ ಝೋನ್ನಲ್ಲಿ ನಿರಂತರಾಗಿ ಕಾರ್ಯನಿರ್ವಹಿಸಿರುವ ಮೀಸಲು ಪೊಲೀಸರಾಗಿದ್ದಾರೆ.
ಇವರ ಜೊತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿದಲ್ಲಿದ್ದವರನ್ನು ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ.