ಬೆಂಗಳೂರು: ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದಂತೆ ಸಾವಿಗೀಡಾಗುವವರ ಸಂಖ್ಯೆಯೂ ನಿಧಾನಕ್ಕೆ ಏರುತ್ತಿದೆ. ಈ ಆತಂಕ ಒಂದೆಡೆ ಇದ್ದರೆ, ಇನ್ನೊಂದೆಡೆ ಸಾವಿಗೀಡಾದ ಸೋಂಕಿತರ ಅಂತ್ಯಸಂಸ್ಕಾರದ ವೇಳೆ ಆರೋಗ್ಯ ಸಿಬ್ಬಂದಿಯ ಬೇಜವಾಬ್ದಾರಿತನವೂ ಎದ್ದು ಕಾಣುತ್ತಿದೆ. ಇದಕ್ಕೆ ಇವತ್ತು ಜೆ.ಸಿ ನಗರದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.
ಜೆ.ಸಿ.ನಗರದಲ್ಲಿ ಶವ ಸಂಸ್ಕಾರಕ್ಕೆ ಮೀಸಲಿಟ್ಟಿದ್ದ ಪ್ರದೇಶಕ್ಕೆ ಆರೋಗ್ಯ ಸಿಬ್ಬಂದಿ ಸೋಂಕಿತ ವ್ಯಕ್ತಿಯ ಮೃತದೇಹ ತಂದಿದ್ದಾರೆ. ಅಂತ್ಯ ಸಂಸ್ಕಾರ ಮುಗಿದ ಬಳಿಕ ಪಿಪಿಇ ಕಿಟ್‌ಗಳನ್ನು ಮರದ ಬುಡದಲ್ಲಿಯೇ ಬಿಟ್ಟುಹೋಗಿದ್ದರು. ಈ ಸುರಕ್ಷಾ ಕಿಟ್‌ಗಳು ಗಾಳಿಗೆ ಹಾರುತ್ತಿದ್ದವು. ಇದು ಸುತ್ತಮುತ್ತಲ ಜನರಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಸಿತ್ತು. ತಕ್ಷಣ ಈ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಸ್ಥಳೀಯ ಕಾರ್ಪೊರೇಟರ್‌ಗೆ ವಿಚಾರ ಮುಟ್ಟಿಸಿದ್ದರು. ಆದರೂ ಪ್ರಯೋಜನವಾಗಲಿಲ್ಲ. ಬಳಿಕ ಪೊಲೀಸರೇ ಪಿಪಿಇ ಕಿಟ್ ಸುಟ್ಟು ಹಾಕಿದ್ದಾರೆ.