ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 1 ರೂಪಾಯಿ ಪ್ರೋತ್ಸಾಹ ಧನ ಹೆಚ್ಚಿಸಲು ಸಿಎಂ ನಿರ್ಧರಿಸಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪರಿಷತ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ವೇಳೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಮೊದಲು ಎಲ್ಲರಿಗೂ ಪ್ರತಿ ಲೀಟರ್ಗೆ 5 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಈಗ SC/ST ಹಾಲು ಉತ್ಪಾದಕರಿಗೆ 1 ರೂ. ಹೆಚ್ಚಳ ಮಾಡಿದ್ದು, ಒಟ್ಟು 6 ರೂಪಾಯಿ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ. ಎಸ್ಸಿಪಿ ಯೋಜನೆಯಡಿ 21,602 ಕೋಟಿ ರೂ. ಹಾಗೂ ಟಿಎಸ್ಪಿಗೆ 8,842 ರೂ. ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಇತ್ತ ಎಸ್ಸಿಪಿಟಿಎಸ್ಪಿ ಯೋಜನೆಯಡಿ ಕೊಡಲಾಗುವ ಅನುದಾನದ ಪೈಕಿ ಕೇವಲ 18ಶೇ.ರಷ್ಟನ್ನು ಬಳಸಲಾಗಿದ್ದು, ಈ ಬಗ್ಗೆ ಸಿಎಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದನ್ನು ಸರಾಸರಿ ಶೇ. 60ಕ್ಕೆ ಏರಿಸುವಂತೆ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು:
*ಕೃಷಿ ಇಲಾಖೆಯಲ್ಲಿ ಯಂತ್ರೋಪಕರಣ ಖರೀದಿ, ಹನಿ ನೀರಾವರಿಗೆ 90% ಸಹಾಯಧನ ನೀಡಲು ನಿರ್ಧಾರ
* ಪಶುಸಂಗೋಪನೆ ಇಲಾಖೆಯಲ್ಲಿ ಹಸು, ಮೇಕೆ, ಕುರಿ, ಸಾಕಾಣಿಕೆ ಯೋಜನೆಗೆ 90% ಸಹಾಯ ಧನ ನೀಡಲು ಒಪ್ಪಿಗೆ
*ರೇಷ್ಮೆ ಸಾಕಣೆದಾರರಿಗೆ ಮತ್ತು ಹೊಲಗಳಲ್ಲಿ ರೇಷ್ಮೆ ಶೆಡ್ ಕಟ್ಟಲು 90% ಸಹಾಯಧನ ನೀಡಲು ನಿರ್ಧಾರ
*ಬಡವರ ಬಂಧು ಯೋಜನೆಯಡಿ ಎಸ್ಸಿ, ಎಸ್ಟಿ ಮಹಿಳೆಯರಿಗೆ 10 ಸಾವಿರ ರೂ. ಸಾಲ ನೀಡಲು ವಿನೂತನ ಯೋಜನೆ ಜಾರಿ
*ಸ್ವಸಹಾಯ ಗುಂಪುಗಳಿಗೆ ನೀಡುವ ಬಡ್ಡಿರಹಿತ ಸಾಲವನ್ನು ಎರಡು ಲಕ್ಷದಿಂದ ಐದು ಲಕ್ಷ ರೂ.ಗೆ ಹೆಚ್ಚಳ ಮಾಡಲು ಒಪ್ಪಿಗೆ
*ಪೌರಕಾರ್ಮಿಕರಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಕಟ್ಟಲು ಆರು ಲಕ್ಷ ರೂ. ವರೆಗೆ ಸಹಾಯಧನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.