ಬೆಂಗಳೂರು: ಇಂದು ಬೆಳಗ್ಗೆ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಮನೆ ಹಾಗೂ ಅವರ ಒಡೆತನದ ಕಾಲೇಜುಗಳ ಮೇಲೆ ನಡೆದಿದ್ದ ದಾಳಿ ರಾತ್ರಿಯಾದರು ಮುಂದುವರೆದಿದೆ. ಮೂಲಗಳ ಪ್ರಕಾರ ನಾಳೆಯೂ ದಾಳಿ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಸೇರಿದಂತೆ ತುಮಕೂರು ಭಾಗದಲ್ಲಿ ಇವರ ಒಡೆತನಕ್ಕೆ ಸೇರಿದ ಎಲ್ಲಾ ಸಂಸ್ಥೆ ಹಾಗೂ ನಿವಾಸದ ಐಟಿ ಇಲಾಖೆ ದಾಳಿ ಮಾಡಿದೆ.
ಒಟ್ಟಾರೆಯಾಗಿ ಸತತ 13 ಗಂಟೆಗಳಾದರೂ ಮಾಜಿ ಉಪ ಮುಖ್ಯಮಂತ್ರಿಯನ್ನು ಬಿಡದ ಐಟಿ ಅಧಿಕಾರಿಗಳು, ದಾಖಲಾತಿಯನ್ನು ಆಧರಿಸಿ ಡ್ರಿಲ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದಾಳಿ ನಾಳೆಯೂ ಮುಂದುವರಿಯಲಿದೆ ಎನ್ನಲಾಗುತ್ತಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಈಡಾಗುತ್ತಿದೆ.
ಇಂದು ಶಾಸಕ ಜಮೀರ್ ಅಹಮದ್, ವಿಧಾನ ಪರಿಷತ್ ಸದಸ್ಯ ವೇಣುಗೋಪಾಲ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದರು. ಕಾಂಗ್ರೆಸ್ ಕಾರ್ಯಕರ್ತರು ಅಹೋರಾತ್ರಿ ಪರಮೇಶ್ವರ್ ನಿವಾಸದ ಬಳಿ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.