ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನ ನಂತರವೇ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿದಲ್ಲಿ ಮಾತ್ರ ಪಂಚಮಸಾಲಿ ಸಮಾಜದ 2ಎ ಸೇರ್ಪಡೆಗೆ ಕಾನೂನಾತ್ಮಕ ರಕ್ಷಣೆ ಸಿಗಲಿದೆ ಎಂದು ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಮಾಡುವ ಮೊದಲೇ ಮುಖ್ಯಮಂತ್ರಿಗಳೇ ನೇರವಾಗಿ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2 ಎಗೆ ಸೇರ್ಪಡೆ ಘೋಷಣೆ ಮಾಡಿದಲ್ಲಿ ಕಾನೂನು ಸಮಸ್ಯೆ ಎದುರಾಗಬಹುದು, ಯಾರಾದರೂ ಇದನ್ನು ಪ್ರಶ್ನಿಸಿ ಕೋರ್ಟ್ಗೆ ಹೋದಲ್ಲಿ ನ್ಯಾಯಾಲಯದಲ್ಲಿ 2ಎ ಸೇರ್ಪಡೆ ವಿಚಾರಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದರು.
ಕಾಯ್ದೆಯ ಪರಿಮಿತಿಯೊಳಗೆ ನಾವು ಹಿಂದುಳಿದ ವರ್ಗಗಳ ಆಯೋಗಕ್ಕೆ ಅಗತ್ಯ ದಾಖಲಾತಿಗಳನ್ನು ಸಲ್ಲಿಕೆ ಮಾಡಿದ್ದೇವೆ. ಆರ್ಥಿಕ ಸ್ಥಿತಿಗತಿಯ ವಿಚಾರ ಇಲ್ಲಿ ಬರಲ್ಲ. ಶೈಕ್ಷಣಿಕ ಮತ್ತು ಸಾಮಾಜಿಕ ಹಿಂದುಳಿವಿಕೆಯನ್ನು ಮಾತ್ರ ನಾವು ಆಯೋಗಕ್ಕೆ ಕೊಡಬೇಕಿದೆ. ಅದೇ ರೀತಿ ನಾವು ಮಾಹಿತಿಗಳನ್ನು ದಾಖಲೆ ಸಮೇತ ಕೊಟ್ಟು ಬಂದಿದ್ದೇವೆ. ಆದಷ್ಟು ಬೇಗ ನಿಗದಿತ ಕಾಲಮಿತಿಯಲ್ಲಿ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ನಂತರ ಸಂಪುಟದ ಸಮ್ಮತಿ ಪಡೆದು ಸರ್ಕಾರ ಆದೇಶ ಹೊರಡಿಸಿದಲ್ಲಿ, ಪಂಚಮಸಾಲಿ ಸಮುದಾಯದ 2ಎ ಸೇರ್ಪಡೆಗೆ ಕಾನೂನಾತ್ಮಕ ರಕ್ಷಣೆ ಸಿಗಲಿದೆ ಎಂದರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ವಿರುದ್ಧ ಯುವ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಕಾನೂನು ವ್ಯಾಪ್ತಿಯಲ್ಲಿ ಮಾಡಿದ ಯಾವುದೇ ಆದೇಶಗಳನ್ನು ನ್ಯಾಯಾಲಯ ಯಾವಾಗಲೂ ಎತ್ತಿ ಹಿಡಿಯಲಿದೆ. ಯಾರೂ ಕೂಡ ಕಾನೂನಿನ ವ್ಯಾಪ್ತಿ ಮೀರಿ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈಗ ಆಯೋಗದ ಶಿಫಾರಸಿನೊಂದಿಗೇ ಮೀಸಲಾತಿ ಘೋಷಣೆ ಮಾಡಬೇಕು. ಸುಪ್ರೀಂಕೋರ್ಟ್ ಈಗಾಗಲೇ ಮೀಸಲಾತಿ ಪ್ರಮಾಣ ಶೇ.50 ಕ್ಕಿಂತ ಹೆಚ್ಚು ಆಗಬಾರದು. ನಾವು ಆ ಸಂವಿಧಾನದ ಪರಿಮಿತಿಯಲ್ಲಿ ಶೇ.50 ರ ಮೀಸಲಾತಿಯಲ್ಲಿ, ಈಗಾಗಲೇ ಶೇ.5 ರ ಮೀಸಲಾತಿ ಇರುವ ಪ್ರವರ್ಗ 3ಬಿ ಯಲ್ಲಿದ್ದೇವೆ. ಅದನ್ನು ಶೇ.15 ರ ಮೀಸಲಾತಿಯ ಪ್ರವರ್ಗ 2ಎ ಗೆ ಸೇರ್ಪಡೆಯಾಗುವುದರಿಂದ ಸಂವಿಧಾನದ ಆಶಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದರು.
ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸುವ ಕುರಿತು ಕುಲಶಾಸ್ತ್ರೀಯ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿ ಹೊರಡಿಸಿದ ಆದೇಶ ಸರಿಯಾಗಿಯೇ ಇದೆ. ಆದರೆ ಆದಷ್ಟು ಬೇಗ ಆಯೋಗ ವರದಿ ನೀಡಬೇಕು, ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ಸಿಗಬೇಕು. ನಂತರವೇ ಅಧಿಸೂಚನೆ ಹೊರಡಿಸಬೇಕಿದೆ, ಆಗ ಮಾತ್ರವೇ ನಮಗೆ ಸಿಗುವ 2ಎ ಮಾನ್ಯತೆಗೆ ಕಾನೂನಾತ್ಮಕ ರಕ್ಷಣೆ ಸಿಕ್ಕಲಿದೆ ಎಂದರು.