ಬೆಂಗಳೂರು: ಪೊಲೀಸ್ ಶ್ವಾನಗಳ ತರಬೇತಿ ಉದ್ಯಾನವನವನ್ನು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಇಂದು ಉದ್ಘಾಟನೆ ಮಾಡಿದರು. ಭಯೋತ್ಪಾದನೆ ಹಾಗೂ ಉಗ್ರರ ಮಟ್ಟ ಹಾಕುವುದು, ಕಳ್ಳರ ಚೇಸ್ ಮಾಡಿ ಹಿಡಿಯುವುದು, ವಾಹನ ಹೈ ಜಾಕಿಂಗ್, ಡ್ರಗ್ ಪೆಡ್ಲರ್ಗಳನ್ನ ಹೇಗೆ ಹಿಡಿಯುವುದು ಅನ್ನುವುದನ್ನು ಈ ಉದ್ಯಾನವನದಲ್ಲಿ ಶ್ವಾನಗಳಿಗೆ ತರಬೇತಿ ನೀಡಲಾಗುತ್ತದೆ.
ಶ್ವಾನ ಮನೋವೈದ್ಯ ತಜ್ಞರಾದ ಡಾಗ್ ಗುರು ಅಮೃತ್ ಅವರ ಸಲಹೆಯ ಮೇರೆಗೆ ಉದ್ಯಾನವನವನ್ನು ₹ 2.5 ಕೋಟಿ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಜರ್ಮನ್ ಶರ್ಫಡ್, ಬೆಲ್ಜಿಯಂ ಶೆಫರ್ಡ್, ಗೋಲ್ಡನ್ ರಿಡ್ರಿವರ್ ಹಾಗೂ ಡಾಬರ್ ಮೆನ್ ಸೇರಿದಂತೆ 50 ಶ್ವಾನಗಳಿಗೆ ತರಬೇತಿ ನೀಡಲಾಗುತ್ತದೆ. ಇನ್ನು ಉದ್ಯಾನವನದಲ್ಲಿ ಪ್ರಥಮ ಬಾರಿಗೆ ಶ್ವಾನ ತಂಡ ಪ್ರದರ್ಶನ ಮಾಡಿ ತನ್ನ ಕಸರತ್ತನ್ನ ತೋರಿಸಿತು..
ಇನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಶ್ವಾನಗಳಿಗೆ ಉತ್ತಮ ತರಬೇತಿಗಾಗಿ ಈ ಉದ್ಯಾನವನವನ್ನು ಮಾಡಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇದಕ್ಕೆ ಅನುದಾನ ನೀಡಿದ್ದಾರೆ. ಈ ಶ್ವಾನಗಳನ್ನು ನಗರದ ಮೂರು ರೈಲ್ವೆ, ಮಾಲ್, ವಿಮಾನ ನಿಲ್ದಾಣ, ಐಟಿಬಿಟಿ, ಮೆಟ್ರೋ ಸೇರಿದಂತೆ ಹಲವು ಕಡೆ ಟೇರರ್ ಅಟ್ಯಾಕ್ ಅಥವಾ ಮೇಜರ್ ತೊಂದರೆಯಾದಾಗ ಭದ್ರತೆಗಾಗಿ ಉಪಯೋಗಿಸಲಾಗುತ್ತದೆ ಎಂದರು.
ಪೊಲೀಸರ ಜೊತೆ ಭದ್ರತೆಗೆ ಇವುಗಳು ಅಲರ್ಟ್ ಆಗಿರಬೇಕು. ಹೀಗಾಗಿ ಇವುಗಳಿಗೆ ತರಬೇತಿ ಉದ್ಯಾನವನ ಮಾಡಲಾಗಿದೆ. ಇಲ್ಲಿ ಯಾವುದೇ ಪ್ರಾಣಿ ಹಿಂಸೆ ಮಾಡಲ್ಲ. ಪ್ರೀತಿಯಿಂದ ನೋಡಿಕೊಳ್ಳಲಾಗುವುದು ಎಂದು ಭಾಸ್ಕರ್ ರಾವ್ ಹೇಳಿದರು. ಈ ವೇಳೆ ಶ್ವಾನ ಮನೋ ತಜ್ಞ ಡಾಗ್ ಗುರು ಅಮೃತ್ ಹಾಗೂ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್, ಕಮಾಂಡ್ ಸೆಂಟರ್ ಡಿಸಿಪಿ ಇಶಾ ಪಂಥ್, ಎಸಿಪಿ ನಿಂಗಾರೆಡ್ಡಿ ಉಪಸ್ಥಿತರಿದ್ದರು.