ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಾಕಷ್ಟು ನಿಯಂತ್ರಣದಲ್ಲಿದೆ. ಆದ್ರೆ ಮಹಾರಾಷ್ಟ್ರ ಸೇರಿ ಮತ್ತಿತರೆ ಹೊರರಾಜ್ಯಗಳಿಂದ ಬಂದವರಿಂದ ಕೊರೊನಾ ಹೆಚ್ಚಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಕೋವಿಡ್ ಪರೀಕ್ಷೆಗೆ ಸಂಚಾರಿ ಸ್ಮಾರ್ಟ್ ಕಿಯೋಸ್ಕ್ ಸಂಚಾರಿ ಪರೀಕ್ಷಾ ಘಟಕಗಳ ಉದ್ಘಾಟನೆ ಬಳಿಕ ಮಾತನಾಡಿದ ಅವರು,, ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸಾಕಷ್ಟು ನಿಯಂತ್ರಣದಲ್ಲಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೊರ ರಾಜ್ಯಗಳಿಂದ ಬರುವವರಿಂದ ಕೊರೊನಾ ಸಾಕಷ್ಟು ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರದ ನಿಯಂತ್ರಣ ವಿಚಾರದಲ್ಲಿ ನಮ್ಮದೇ ಆದಂತಹ ಆರೋಗ್ಯ ಸೇವೆಗಳು ನಿಯಂತ್ರಣ ವಿಧಾನವನ್ನು ಅನುಸರಿಸಿ ಯಶಸ್ವಿಯಾಗಿದೆ ಎಂದು.
ನಿಯಂತ್ರಣ ಕ್ರಮದ ಜೊತೆಗೆ ಕೋವಿಡ್ ಸೋಂಕಿತರನ್ನು ತಪಾಸಣೆಗೆ ಒಳಪಡಿಸುವ ವಿಚಾರದಲ್ಲಿ ನಮ್ಮ ಸಾಧನೆ ಉತ್ತಮವಾಗಿದೆ. ಜನಸಂಖ್ಯೆ ಆಧಾರಗಳ ಮೇಲೆ ಈ ಸ್ಮಾರ್ಟ್ ಕಿಯೋಸ್ಕ್ಗಳನ್ನು 15 ಕಡೆ ಸ್ಥಾಪನೆ ಮಾಡಲಿದ್ದು, ಇದರಿಂದ ಹೆಚ್ಚು ಪರೀಕ್ಷೆ ಮಾಡಲು ಅನುಕೂಲವಾಗಲಿದೆ. ಸರ್ಕಾರದ ಜತೆ ಕೈ ಜೋಡಿಸಿ ಸ್ಮಾರ್ಟ್ ಕಿಯೋಸ್ಕ್ ಇತರ ಖಾಸಗಿ ಕಂಪನಿಗಳಿಗೆ ಮಾದರಿಯಾಗಿದೆ. ಬೆಂಗಳೂರು ಕೊರೊನಾ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ಸರ್ಕಾರವೇ ತಿಳಿಸಿದೆ ಎಂದರು.
ಡಿಸಿಎಂ ಡಾ. ಅಶ್ವಥ್ ನಾರಾಯಣ ಮಾತನಾಡಿ, ವಿಪ್ರೋ ಸಂಸ್ಥೆಯ ಸಹಯೋಗದೊಂದಿಗೆ ಸ್ಮಾರ್ಟ್ ಕಿಯೋಸ್ಕ್ಗಳು ಕಾರ್ಯನಿರ್ವಹಣೆ ಮಾಡಲಿದೆ. ಸ್ಯಾಂಪಲ್ ಕಲೆಕ್ಷನ್ ಮಾಡೋದು ದೊಡ್ಡ ಸವಾಲಾಗಿತ್ತು. ಈ ಕಿಯೋಸ್ಕ್ ಮೂಲಕ ವೈದ್ಯರು, ರೋಗಿಗಳು ಪರಸ್ಪರ ಸಂಪರ್ಕಕ್ಕೆ ಬರದೇ ಸುಲಭವಾಗಿ ಸ್ಯಾಂಪಲ್ ಕಲೆಕ್ಷನ್ ಮಾಡಬಹುದು. ಎಲ್ಲಿ ಬೇಕಾದರೂ ಕಿಯೋಸ್ಕ್‌ಗಳನ್ನ ಬಳಸಬಹುದಾಗಿದೆಯೆಂದು ತಿಳಿಸಿದರು.
ಕೊರೊನಾ ವೈರಸ್ ನಮ್ಮನ್ನ ಬಿಟ್ಟು ಹೋಗೋದಿಲ್ಲ, ಶಾಶ್ವತವಾಗಿ ನಮ್ಮ ಜೊತೆಯಲ್ಲೇ ಉಳಿದುಕೊಳ್ಳಲಿದ್ದು, ಜನರು ಎಚ್ಚರಿಕೆಯಿಂದಿರಬೇಕು. ವೈರಸ್ ಎದುರಿಸಲು ನಾವು ಸಜ್ಜಾಗಿದ್ದೇವೆ, ಹಾಗಾಗಿ ಯಾವುದೇ ಆತಂಕ ಇಲ್ಲ ಎಂದರು. ಈ ವೇಳೆ ವಿಪ್ರೋ ಸಂಸ್ಥೆಯ ಮುಖ್ಯಸ್ಥರು ಕೂಡಾ ಪಾಲ್ಗೊಂಡಿದ್ದರು.