ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ 15 ಅಂಬಾರಿ ಉತ್ಸವ ಸ್ಲೀಪರ್ ವಾಹನಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಒಟ್ಟು 50 ಸ್ಲೀಪರ್ ಬಸ್ಗಳ ಪೈಕಿ ಮೊದಲ ಹಂತವಾಗಿ 15 ಬಸ್ಗಳಿಗೆ ಚಾಲನೆ ನೀಡಲಾಯಿತು. ಬಿಎಸ್-6, 9600 ಎಸ್ ಮಾದರಿಯ ಮಲ್ಟಿ ಎಕ್ಸೆಲ್ ಸ್ಲೀಪರ್ ವಾಹನ ಇದಾಗಿದೆ.
ಸಮಾರಂಭದಲ್ಲಿ ಸಿಎಂ ಮಾತನಾಡಿ, ಇದೊಂದು ಪಡೆಯಾಗಿ ಕೆಲಸ ಮಾಡಬೇಕು, ದೂರ ಪ್ರಯಾಣಕ್ಕೆ ರೈಲ್ವೆ ಪ್ರಯಾಣಕ್ಕೂ ಉತ್ತಮ ವ್ಯವಸ್ಥೆ ಮಾಡಿದ್ದಾರೆ. ಹಿಂದೆಲ್ಲಾ ಸ್ಲೀಪರ್ ಬಸ್ ಇದ್ದರೂ ಬಾಡಿ ಬಿಲ್ಡರ್ ಮಾಡುತ್ತಿದ್ದರು. ಅದು ಅಷ್ಟು ಉಪಯುಕ್ತವಾಗಿರಲಿಲ್ಲ. ಆದರೆ ಬಸ್ ಸಂಸ್ಥೆಯವರೇ ವಿನ್ಯಾಸ ಮಾಡಿದ್ದಾರೆ. ಉತ್ತಮ ರೀತಿಯ ವಿನ್ಯಾಸವಾಗಿದೆ ಇದರ ಉಪಯೋಗ ಪಡಿಸಿಕೊಳ್ಳಿ, ರಾತ್ರಿ ಪ್ರಯಾಣಕ್ಕೆ ಇನ್ನಷ್ಟು ಬಸ್ ಬಳಕೆ ಸೂಕ್ತ ಎಂದರು.
ಕೆಎಸ್ಆರ್ಟಿಸಿ ಗೆ ತನ್ನದೇ ಆದ ಇತಿಹಾಸವಿದೆ. ನಾವೆಲ್ಲಾ ಕೆಎಸ್ಆರ್‌ಟಿಸಿ ಬಸ್ ನಲ್ಲೇ ನಾವು ಶಾಲೆಗೆ ಹೋಗುತ್ತಿದ್ದೆವು. ಆಗ ಬಸ್ಸುಗಳ ಚಾಲಕರೇ ಬಸ್ಸುಗಳ ಅಲಂಕಾರ ಮಾಡುತ್ತಿದ್ದರು ಅದರಲ್ಲೂ ಪೈಪೋಟಿ ಇತ್ತು, ಚಾಲಕರ ಹೆಸರೇಳಿ ಆ ಬಸ್ ಹತ್ತುತ್ತಿದ್ದೆವು ಆ ರೀತಿಯ ಹೊಂದಾಣಿಕೆ ಆಗ ಇತ್ತು. ಹಳ್ಳಿಗಾಡಿನಲ್ಲಿ ನಮ್ಮ ಜನ ಪ್ರಯಾಣ ಗುರುತಿಸಿಕೊಳ್ಳುವುದೇ ಕೆಂಪುಬಸ್ ನಿಂದ, ಇಂದು ಖಾಸಗಿ ಪೈಪೋಟಿ ಎದುರಿಸಬೇಕಿದೆ, ಯಾವ ರೂಟ್ ನಲ್ಲಿ ಲಾಭ ಇದೆಯೋ ಅಲ್ಲಿ ಮಾತ್ರ ಖಾಸಗಿ ಬಸ್ ಓಡಿಸುತ್ತಾರೆ, ಲಾಭದಾಯಕವಲ್ಲದ ಮಾರ್ಗ ನಿಗಮಕ್ಕೆ ಬಿಡುತ್ತಾರೆ ಹಾಗಾಗಿ ವಾಣಿಜ್ಯ ಮಾರ್ಗ ಮತ್ತು ಸೇವಾ ಮಾರ್ಗ ಎರಡನ್ನೂ ಒಳಗೊಂಡು ಯೋಜನೆ ಮಾಡಿ ಎಂದು ಸಲಹೆ ಕೊಟ್ಟರು.
ಶ್ರೀನಿವಾಸ ಮೂರ್ತಿ ನಿಗಮದ ಸುಧಾರಣೆಗೆ ವರದಿ ನೀಡಿದ್ದು ಅದರ ಅನುಷ್ಠಾನಕ್ಕೆ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸಲಾಗುತ್ತದೆ. ಸ್ವಂತ ಬಲದಲ್ಲಿ ಇರುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಕೋವಿಡ್ ವೇಳೆ ಇಂಧನ ವೆಚ್ಚ, ವೇತನಕ್ಕೆ ಸರ್ಕಾರ 4,600 ಕೋಟಿ ಕೊಡಲಾಗಿದೆ. ಸಂಪೂರ್ಣ ಬೆಂಬಲ ಕೊಡುತ್ತಲೇ ಬರುತ್ತಿದೆ. ಎಲ್ಲ ಸಹಕಾರ ಸರ್ಕಾರದಿಂದ ಸಿಗಲಿದೆ. ವಾಣಿಜ್ಯ ಮಾರ್ಗ ಹೆಚ್ಚಿಸಿ, ಆಯಿಲ್, ಟಯರ್ ನಲ್ಲಿ ಪಾರದರ್ಶಕತೆ ತನ್ನಿ, ಲಾಭದಾಯಕ ಮಾಡಿ, ಮತ್ತೊಮ್ಮೆ ನಮಗೆ ಕೆಎಸ್ಆರ್‌ಟಿಸಿ ಲಾಭದಾಯಕವಾಗುವುದನ್ನು ನೋಡುವ ಆಸೆ ಇದೆ ಎಂದು ಹೇಳಿದರು.
ವೇತನ ಪರಿಷ್ಕರಣೆ ಬೇಡಿಕೆ ಬಂದಿದೆ, ಮಾತುಕತೆ ನಡೆಸಿ ಹಣಕಾಸು ಇತಿಮಿತಿಯಲ್ಲಿ ಮಾಡುವ ಭರವಸೆ ನೀಡಿದ ಸಿಎಂ, ತಂತ್ರಜ್ಞಾನ ಬದಲಾಗುತ್ತಿದೆ ಅದಕ್ಕೆ ತಕ್ಕಂತೆ ಪ್ರಯಾಣಿಕರ ಅಪೇಕ್ಷೆ ಬದಲಾಗುತ್ತಿದೆ. ಖಾಸಗಿಗೆ ಪೈಪೋಟಿ ನೀಡಿ ಜನಮನ್ನಣೆಗಳಿಸಬೇಕು. ಜನರಿಗೆ ಅನುಕೂಲವಾಗುವ ರೀತಿ ಸೇವೆ ಮಾಡಬೇಕು. ವಿದ್ಯಾರ್ಥಿನಿಯರು ಮತ್ತು ದುಡಿಯುವ ಹೆಣ್ಣು ಮಕ್ಕಳಿಗೆ ಏಪ್ರಿಲ್ 1 ರಿಂದ ಉಚಿತ ಪಾಸ್ ಕೊಡುವ ವ್ಯವಸ್ಥೆ ಮಾಡಿ ಎಂದು ಬಜೆಟ್ ನಲ್ಲಿ ಘೋಷಿಸಿದ್ದಂತೆ ಸೂಚನೆ ನೀಡಿದರು.
ಶಾಲಾ ಬಸ್ ಯೋಜನೆ, ಮಿನಿ ಶಾಲೆ ಬಸ್ ಪರಿಚಯಿಸಬೇಕು, ಇದ್ದರೆ ಸರಿ ಇಲ್ಲದಿದ್ದರೆ ಲೀಸ್ ಮೇಲೆ ಪಡೆದು ಶಾಲೆ ಆರಂಭವಾದಾಗ ಎಲ್ಲಾ ತಾಲ್ಲೂಕುಗಳಲ್ಲಿ ಕನಿಷ್ಠ 3-5 ಹೊಸ ಬಸ್ ಪ್ರಾರಂಭಿಸಬೇಕು ಅಗತ್ಯ ಬಿದ್ದರೆ ಇನ್ನಷ್ಟು ಶೆಡ್ಯೂಲ್ ಮಾಡಲು ಸಹಕಾರ ನೀಡಲಾಗುತ್ತದೆ. ಕೆಎಸ್ಆರ್‌ಟಿಸಿ ಗೆ ಉತ್ತಮ ಭವಿಷ್ಯ ಇದೆ. ಸರ್ಕಾರ ನೌಕರ ವರ್ಗ, ಆಡಳಿತ ಮಂಡಳಿ ಎರಡರ ಜೊತೆಯೂ ಇರಲಿದೆ ಎಂಬ ಭರವಸೆ ಕೊಟ್ಟರು.
ಟಿಕೆಟ್ ದರ ಹೆಚ್ಚಳ ಮಾಡುವ ಪ್ರಸ್ತಾಪ ಮಾಡಲ್ಲ ಆದರೆ ಸಾರಿಗೆ ನೌಕರರಿಗೆ ಸಂಬಳ ಹೆಚ್ಚಳ ಮಾಡಿ ಎಂದು ಸಿಎಂ ಬೊಮ್ಮಾಯಿಗೆ ವೇದಿಕೆಯಲ್ಲಿ ಮನವಿ ಮಾಡಿದರು ಕೆಎಸ್ಆರ್ಟಿಸಿ ಅಧ್ಯಕ್ಷ ಶಾಸಕ ಚಂದ್ರಪ್ಪ.
ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ ವಿಶೇಷತೆ: ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ ' ಅಂಬಾರಿ ಉತ್ಸವ' ಎಂದು ಹೆಸರಿಡಲಾಗಿದೆ. ಮೇಲ್ಮೈಯು ಏರೋಡೈನಾಮಿಕ್ ಮೇರುಕೃತಿ, ವೇಗದ ಕಾರ್ಯಾಚರಣೆಯಲ್ಲಿ ಗಾಳಿಯ ಸೆಳೆತ ತಗ್ಗಿಸಲು ಪೂರಕ ಹಾಗೂ ಇಂಧನ ಉಳಿತಾಯ 40 ಆಸನಗಳು, 2×1 ಆಸನದ ವ್ಯವಸ್ಥೆ ಹೊಂದಿದೆ. ಜೊತೆಗೆ ಪ್ರಯಾಣಿಕರಿಗೆ ಕುಳಿತುಕೊಳ್ಳುವ, ಮಲಗುವ ಸ್ಥಾನದಲ್ಲಿ ಬೆಸ್ಟ್ ಇನ್ ಕ್ಲಾಸ್ ಹೆಡ್ ರೂಮ್ ಸೌಲಭ್ಯ. ಕೆಳಗಿನ ಆಸನ 867 ಮಿ.ಮೀ., ಮೇಲಿನ ಆಸನ 850 ಮಿ.ಮೀ. ಹಾಗೂ ಹಿಂಬದಿ 790 ಮಿ.ಮೀ. ಕಂಪಾರ್ಟ್ ಮೆಂಟ್ ಆಸನಗಳು.
ಪ್ರತಿ ಮೇಲಿನ ಆಸನದಲ್ಲಿ ಜಾರುವುದನ್ನು ತಡೆಯಲು ಪಿಯು ಫೋಮ್ ಲ್ಯಾಡರ್, ಕೆಳಗಿನ ಆಸನವನ್ನು ಘನಾಕೃತಿಯೊಂದಿಗೆ ಅಳವಡಿಸಿ ಬಲ ಪಡಿಸಲಾಗಿದೆ.
ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸುಧಾರಿತ ಆಸನದ ಮೇಲೆ ಪ್ರೀಮಿಯಂ ರೆಕ್ಸಿನ್ ಹೊದಿಸಲಾಗಿದೆ. ಪರಿಸರ ಕಾಳಜಿ, ಸುರಕ್ಷತೆ, ಉತ್ತಮ ಗುಣಮಟ್ಟದ ಬಲಿಷ್ಠ ಸ್ಕ್ಯಾಂಡಿನೇವಿಯನ್ ವಿನ್ಯಾಸವಿದೆ. ಹಾಗೆ ಆಸನವು ಕ್ಯುಬಿಕಲ್ ಸಮಗ್ರ ಪರಿಕರ, ಓದಲು ಎರಡು ಲೈಟ್ ಗಳು, ಮೊಬೈಲ್ ಹೋಲ್ಡರ್, ಎರಡು ಯುಎಸ್ ಬಿ ಪೋರ್ಟ್, ವಿಶಾಲವಾದ ಗ್ಲಾಸ್ ಕಿಟಕಿಗಳ ವಿನ್ಯಾಸ, ವಿಹಂಗಮ ನೋಟದ ಆಸ್ವಾದ, ಆರಾಮದಾಯಕ ಪ್ರಯಾಣವಿರಲಿದೆ.
ಬಸ್ ಸಂಚಾರ ಎಲ್ಲಿಂದ ಎಲ್ಲಿಗೆ?: ಸದ್ಯ ಬಸ್ ಬೆಂಗಳೂರಿನಿಂದ ಸಿಕಂದರಾಬಾದ್, ಹೈದರಾಬಾದ್, ಎರ್ನಾಕುಲಂ, ತಿರುವನಂತಪುರಂ, ತ್ರಿಚೂರು, ಪಣಜಿ, ಕುಂದಾಪುರ ದಿಂದ ಬೆಂಗಳೂರು ಹಾಗೂ ಮಂಗಳೂರಿನಿಂದ ಪುಣೆಗೆ ಸಂಚಾರ ಮಾಡಲಿದೆ.
ಇದನ್ನು ಓದಿ: ಪ್ರಥಮ ಪಿಯುಸಿ ಆಂಗ್ಲಭಾಷಾ ಪ್ರಶ್ನೆ ಪತ್ರಿಕೆ ಸೋರಿಕೆ; ಮಾರ್ಚ್ 6ಕ್ಕೆ ಎಕ್ಸಾಮ್ ಮುಂದೂಡಿಕೆ