ಬೆಂಗಳೂರು: ನೈಋತ್ಯ ರೈಲ್ವೆ ವಲಯ ಹತ್ತು ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಾರ್ವಜನಿಕ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಅದರಲ್ಲೂ ಕೊರೊನಾ ನಿಯಂತ್ರಣಕ್ಕೆ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಲು ಹಾಗೂ ಆಸ್ಪತ್ರೆಗಳಿಗೆ ಹೊರೆಯನ್ನು ತಗ್ಗಿಸಲು ರೈಲ್ವೆ ಬೋಗಿಗಳನ್ನು ಐಸೋಲೇಶನ್ ಕೋಚ್ ಆಗಿ ಮಾರ್ಪಡಿಸಲಾಗಿತ್ತು. ಆದರೆ, ರೈಲ್ವೆ ಐಸೋಲೇಶನ್ ಕೋಚ್ ಸರಿಯಾಗಿ ಉಪಯೋಗವಾಗದೇ ಯೋಜನೆಯೇ ಸದ್ಬಳಕೆಯಾಗಿಲ್ಲ.
ನೈಋತ್ಯ ರೈಲ್ವೆ ವಲಯದಿಂದ 320 ರೈಲ್ವೆ ಕೋಚ್ಗಳನ್ನು ಲಾಕ್ಡೌನ್ ಸಂದರ್ಭದಲ್ಲಿ ರೈಲ್ವೆ ಸಂಚಾರ ಸ್ಥಗಿತಗೊಳಿಸಿ ಐಸೋಲೇಶನ್ ಕೋಚ್ ಆಗಿ ಮಾರ್ಪಡಿಸಲಾಗಿತ್ತು. ಈ ಹಿಂದೆ ರೈಲ್ವೆ ಸಚಿವರಾಗಿದ್ದ ದಿ.ಸುರೇಶ್ ಅಂಗಡಿಯವರ ನಿರ್ದೇಶನದಲ್ಲಿ ಐಸೋಲೇಶನ್ ಕೋಚ್ ಸಿದ್ಧಪಡಿಸಿ, ಆಯಾ ಜಿಲ್ಲಾಡಳಿತ ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದ್ರೇ, ನೈರುತ್ಯ ರೈಲ್ವೆ ವಲಯದಲ್ಲಿ ಕೋಚ್ಗಳು ಮಾತ್ರ ಬಳಕೆಯಾಗಿಲ್ಲ.
320 ಕೋಚ್ಗಳಿಗೆ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ನೈಋತ್ಯ ರೈಲ್ವೆ ವಲಯ ಮಾಹಿತಿಯನ್ನು ಕೂಡ ನೀಡಿತ್ತು. ಲಿಖಿತ ರೂಪದಲ್ಲಿ ಬಳಕೆಗೆ ಅನುಮತಿ ಕೋರುವಂತೆ ಕೂಡ ತಿಳಿಸಿತ್ತು. ಆದರೆ, ರೈಲ್ವೆ ಐಸೋಲೇಶನ್ ಕೋಚ್ ಮಾತ್ರ ಏಳೆಂಟು ತಿಂಗಳಾದರೂ ಕೂಡ ಉಪಯೋಗಕ್ಕೆ ಬಾರದಂತಾಗಿದೆ.
ಇನ್ನು ಮೈಸೂರು ರೈಲ್ವೆ ವಿಭಾಗದ ವತಿಯಿಂದ 128 ರೈಲ್ವೆ ಕೋಚ್ಗಳನ್ನು ಕೋವಿಡ್ ಸೆಂಟರ್ಗಳಾಗಿ ಪರಿವರ್ತನೆ ಮಾಡಲಾಗಿದ್ದು, ಇವುಗಳನ್ನು ಹಾಸನ, ಶಿವಮೊಗ್ಗ ಟೌನ್, ಅರಸಿಕೆರೆ ಹಾಗೂ ಮೈಸೂರು ಫ್ಲಾಟ್ ಫಾರಂ ನಲ್ಲಿ ಇಡಲು ಪ್ಲಾನ್ ಮಾಡಲಾಗಿದೆ.
ಪ್ರತಿಯೊಂದು ಬೋಗಿಗೂ 9 ಮಂದಿ ಕೋವಿಡ್ ಸೋಂಕಿತರು ಹಾಗೂ ಮೆಡಿಕಲ್ ಸ್ಟಾಫ್ ಇರಲು ಇದರ ಜೊತೆಗೆ ಆಕ್ಸಿಜನ್ ಸಿಲಿಂಡರ್ ಇಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಟ್ಟಿದೆ. ಒಂದೊಂದು ರೈಲ್ವೆ ಬೋಗಿಯನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತನೆ ಮಾಡಲು ಸುಮಾರು 35 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಆದ್ರೇ , ಅವುಗಳು ಸರಿಯಾಗಿ ಬಳಕೆಯಾಗಿಲ್ಲ.
ಕೊರೊನಾ ವೈರಸ್ ಪ್ರಮಾಣ ದಿನದಿಂದ ದಿನಕ್ಕೆ ತಗ್ಗುತ್ತಿದ್ದು, ಇನ್ಮುಂದೆ ಐಸೋಲೇಶನ್ ಕೋಚ್ಗಳು ಬಳಕೆಗೆ ಬರುತ್ತವೆಯೇ ಅಥವಾ ಮತ್ತೆ ಅವುಗಳನ್ನು ಪ್ರಯಾಣಿಕರ ಕೋಚ್ಗಳನ್ನಾಗಿ ಮಾರ್ಪಡಿಸಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆಯೋ ಕಾದು ನೋಡಬೇಕಿದೆ.