ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸಬೇಕಿರುವ ದಿನಾಂಕವನ್ನು ಪ್ರತಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಉಪಸ್ಥಿತಿಯಲ್ಲಿ ನಿರ್ಧರಿಸಲು ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರ ಕೈಗೊಂಡಿದ್ದು, ಬುಧವಾರಕ್ಕೆ ದಿನಾಂಕ ನಿಗದಿ ಬಹುತೇಕ ಅಂತಿಮ ಎನ್ನಲಾಗಿದೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕಲಾಪ ಸಲಹಾ ಸಮಿತಿ ಸಭೆ ನಡೆಯಿತು. ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಡಿಸಿಎಂ ಡಾ. ಜಿ ಪರಮೇಶ್ವರ, ಸಚಿವರಾದ ಹೆಚ್ ಡಿ ರೇವಣ್ಣ, ಡಿ.ಕೆ ಶಿವಕುಮಾರ್, ಕೆ ಜೆ ಜಾರ್ಜ್ ಭಾಗಿಯಾಗಿದ್ದರು. ಆದರೆ, ವಿಪಕ್ಷ ನಾಯಕ ಯಡಿಯೂರಪ್ಪ ಸಭೆಗೆ ಗೈರಾಗಿದ್ದರು.
ಬಿಜೆಪಿ ಸದಸ್ಯರ ಅನುಪಸ್ಥಿತಿಯಲ್ಲಿ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಎರಡು ವಾರ ನಡೆಯುವ ಕಲಾಪದಲ್ಲಿ ಏನೆಲ್ಲಾ ನಡೆಸಬೇಕು ಎನ್ನುವ ಕುರಿತ ಚರ್ಚೆ ನಡೆಯಿತು. ನಂತರ ವಿಶ್ವಾಸ ಮತ ಯಾಚನೆ ಕುರಿತು ಇಂದು ಸದನದಲ್ಲಿ ಸಿಎಂ ನೀಡಿದ್ದ ಹೇಳಿಕೆ ಬಗ್ಗೆಯೂ ಪ್ರಸ್ತಾಪವಾಗಿ ಚರ್ಚೆ ನಡೆಯಿತು.
ಬಹುಮತ ಸಾಬೀತುಪಡಿಸಲು ಸಿದ್ದನಿದ್ದೇನೆ. ಸೋಮವಾರವೇ ಬೇಕಾದರೂ ವಿಶ್ವಾಸ ಮತ ಯಾಚಿಸುವೆ. ಸ್ಪೀಕರ್ ಹೇಳುವ ಸಮಯದಲ್ಲಿ ಕೂಡಾ ವಿಶ್ವಾಸಮತ ಯಾಚನೆಗೆ ಸಿದ್ದನಿದ್ದೇನೆ. ಹಾಗಾಗಿ ಈ ಬಗ್ಗೆ ದಿನಾಂಕ ನಿಗದಿಗೊಳಿಸಿ ಎಂದು ಸಿಎಂ ಕುಮಾರಸ್ವಾಮಿ ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.
ಸಿಎಂ ಹೇಳಿಕೆಗೆ ಸಭೆಯಲ್ಲಿಯೇ ಪ್ರತಿಕ್ರಿಯೆ ನೀಡಿದ ಸ್ಪೀಕರ್, ಪ್ರತಿಪಕ್ಷ ನಾಯಕರ ಅನುಪಸ್ಥಿತಿಯಲ್ಲಿ ದಿನಾಂಕ ನಿಗದಿ ಸರಿಯಲ್ಲ. ಅವರ ಅಭಿಪ್ರಾಯ ಕೇಳುವುದು ವಾಡಿಕೆ. ಸೋಮವಾರ ಮತ್ತೆ ಸಭೆ ನಡೆಸಿ ದಿನಾಂಕ ನಿಗದಿಪಡಿಸೋಣ ಎಂದಿದ್ದಾರೆ. ಮೈತ್ರಿ ಪಕ್ಷಗಳ ಮೂಲಗಳ ಪ್ರಕಾರ ಬುಧವಾರಕ್ಕೆ ವಿಶ್ವಾಸಮತ ಯಾಚಿಸುವ ದಿನಾಂಕ ನಿಗದಿ ಮಾಡಲಾಗುತ್ತದೆ.