ಬೆಂಗಳೂರು : ವೀಕೆಂಡ್ ಬಂದ್ರೆ ಲೇಟ್ ನೈಟ್ ನಿದ್ದೆ ಮಾಡ್ತಾ, ಬೆಳಗ್ಗೆ ಲೇಟ್ ಆಗಿ ಏಳೋದು ಮಾಮೂಲಿ. ಆದರೆ, ಇವತ್ತು ಸಿಲಿಕಾನ್ ಸಿಟಿ ಮಂದಿ ಮುಂಜಾನೆಯೇ ಎದ್ದು ಬೀದಿಗಿಳಿದು ಓಡಲು ಶುರು ಮಾಡಿದರು.. ಅಂದಹಾಗೇ, ಇದಕ್ಕೆಲ್ಲ ಕಾರಣ ಎನ್‌ಸಿಸಿ ಮತ್ತು ಭಾರತೀಯ ಸೇನೆಯ ಯೋಧರು. ದೈಹಿಕ ಆರೋಗ್ಯ ಭಾಗ್ಯಕ್ಕೆ ಮೆಗಾ ಎನ್‌ಸಿಸಿ ಮ್ಯಾರಥಾನ್ ಆಯೋಜಿಸಲಾಗಿತ್ತು.
ಜನವರಿ 26 ರಂದು ಪ್ರಧಾನಿ ಮೋದಿ ದೆಹಲಿಯಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಎನ್‌ಸಿಸಿ ಪಾತ್ರ ಅಭಿಯಾನಕ್ಕೆ ಚಾಲನೆ ನೀಡಿದರು. ಇದರ ಭಾಗವಾಗಿ ಇಂದು ಮ್ಯಾರಥಾನ್‌ಗೆ ಕಂಠೀರವ ಕ್ರೀಡಾಂಗಣದಿಂದ ಫ್ಲಾಗ್ ಆಫ್ ಮಾಡಲಾಯಿತು. ಅಲ್ಲಿಂದ ಕಬ್ಬನ್ ಪಾರ್ಕ್, ಎಂ.ಜಿ ರೋಡ್ ಮುಖಾಂತರ ಮಣಿಕ್ ಷಾ ಪರೇಡ್ ಗ್ರೌಂಡ್‌ವರೆಗೆ ಮ್ಯಾರಥಾನ್ ನಡೆಸಲಾಯಿತು.
ಮ್ಯಾರಥಾನ್‌ನಲ್ಲಿ 2000ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳು, 400 ಮಿಲಿಟರಿ ಅಧಿಕಾರಿಗಳು ಭಾಗಿಯಾಗಿದರು. ಅತೀ ಉತ್ಸಾಹದಿಂದ ಈ ಓಟದಲ್ಲಿ ಭಾಗಿಯಾಗಿ, ದೈಹಿಕ ಆರೋಗ್ಯಕ್ಕಾಗಿ ಪರಿಶ್ರಮ ಅಗತ್ಯ ಎಂದು ಸಾರಿದರು. ಆರೋಗ್ಯ ಭಾಗ್ಯದ ಮಹತ್ವ ತಿಳಿಸಲು ಈ ವಿಶೇಷ ಮ್ಯಾರಥಾನ್ ಆಯೋಜನೆ ಮಾಡಲಾಗಿತ್ತು.