ಬೆಂಗಳೂರು: ನಾಲಿಗೆ ಮೇಲೆ ನಿಂತ ನಾಯಕ ಎಂದೇ ಪ್ರಸಿದ್ಧರಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಲೆಕ್ಕಾಚಾರ ಎಲ್ಲಿ ತಪ್ಪಿತು ಎನ್ನುವುದು ನನಗೂ ತಿಳಿಯುತ್ತಿಲ್ಲ ಎಂದು, ಮಾಜಿ ಸಂಸದ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಕುಮಾರಕೃಪ ಅತಿಥಿ ಗೃಹದಲ್ಲಿ ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ' ಟಿಕೆಟ್ ಸಿಗದಿರಲು ಕಾರಣವೇನು ಎಂಬುದಕ್ಕೆ ನನಗೆ ಈಗಲೂ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ನಾನು ಯಡಿಯೂರಪ್ಪ ಅವರ ಮೇಲೆ ನಂಬಿಕೆ ಹಾಗೂ ವಿಶ್ವಾಸ ಇರಿಸಿಕೊಂಡಿರುವ ವ್ಯಕ್ತಿ. ಕೊಟ್ಟ ಮಾತನ್ನು ಅವರು ಇದುವರೆಗೂ ಉಳಿಸಿಕೊಂಡು ಬಂದಿದ್ದಾರೆ. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಅವರು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲಾ ನಾಯಕರು ಸೇರಿ ನಮ್ಮ ನಾಲ್ವರು ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ಗೆ ಕಳಿಸಿಕೊಟ್ಟಿದ್ದರು. ಆದರೆ ದೆಹಲಿಯಲ್ಲಿ ಯಾರೋ ಇನ್ನೊಬ್ಬರ ಹೆಸರನ್ನು ಸೇರಿಸಿ ನನ್ನ ಹೆಸರನ್ನು ಕೈಬಿಟ್ಟು ಪಟ್ಟಿ ಕಳಿಸಲಾಯಿತು. ಯಾಕೆ ಕೈಬಿಟ್ಟರು ಎನ್ನುವುದು ನನಗೆ ಗೊತ್ತಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿ ಅವರನ್ನು ಇಂದು ಭೇಟಿಯಾಗಿದ್ದೆ. ನಾನೇನು ಮಾಡಲಪ್ಪ ಹೀಗಾಗಿದೆ ಎಂದರು. ಆಲ್ ರೈಟ್ ರಾಜಕಾರಣದಲ್ಲಿ ನಾವು ಅಂದುಕೊಂಡಂತೆ ಎಲ್ಲಾ ಆಗುವುದಿಲ್ಲ. ಒಮ್ಮೊಮ್ಮೆ ಹೀಗೂ ಆಗುತ್ತದೆ. ನಮ್ಮ ನಿರೀಕ್ಷೆಗಳು ಒಮ್ಮೊಮ್ಮೆ ಹುಸಿಯಾಗುತ್ತವೆ. ಕೆಲವೊಮ್ಮೆ ನಿರೀಕ್ಷೆಗೂ ಮೀರಿದ ಯಶಸ್ಸುಗಳು ಸಿಗುತ್ತಿರುತ್ತವೆ. ಹೀಗಾಗಿ ಈಗ ಏನು ಹೇಳಲು ಸಾಧ್ಯವಿಲ್ಲ' ಎಂದರು.
ಬೇಜಾರಿಲ್ಲ:
ನನಗೆ ಯಾವುದೇ ಬೇಸರ ಇಲ್ಲ. 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ದೇವರಾಜ್ ಅರಸು, ವೀರೇಂದ್ರ ಪಾಟೀಲ್, ಗುಂಡೂರಾವ್, ವೀರಪ್ಪ ಮೊಯ್ಲಿ, ಬಂಗಾರಪ್ಪ, ಎಸ್.ಎಂ. ಕೃಷ್ಣ ಹಾಗೂ ಈಗ ಯಡಿಯೂರಪ್ಪ ಅವರೊಂದಿಗೆ ಕಾರ್ಯನಿರ್ವಹಿಸಿ ಸಾಕಷ್ಟು ಕಲಿಯುವ ಅವಕಾಶ ಸಿಕ್ಕಿದೆ. ಕೆಲವೊಮ್ಮೆ ಅವಕಾಶ ವಂಚಿತರಾಗುತ್ತೇವೆ. ಅದಕ್ಕೆ ಬೇಸರ ಮಾಡಿಕೊಳ್ಳುವುದು ಸರಿಯಲ್ಲ. ಆವಕಾಶಗಳು ಬರುತ್ತವೆ, ಹೋಗುತ್ತವೆ ಈಗ ಸಿಕ್ಕಿಲ್ಲ ಎಂದು ಬೇಸರ ಪಟ್ಟುಕೊಳ್ಳುವುದು ಸರಿಯಲ್ಲ. ನೋಡೋಣ ಮುಂದೆ ಅವಕಾಶ ಸಿಗಬಹುದು' ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ನಿರೀಕ್ಷೆಗಳು ಹಾಗೂ ನಂಬಿಕೆಗಳ ಮೇಲೆ ನಮ್ಮ ಜೀವನ ಸಾಗುತ್ತಿರುತ್ತದೆ. ಕೆಲವೊಮ್ಮೆ ನಮ್ಮ ನಿರೀಕ್ಷೆಗಳು ಈಡೇರುವುದಿಲ್ಲ. ಕೆಲವೊಮ್ಮೆ ನಿರೀಕ್ಷೆಗೂ ಮೀರಿದ ಅವಕಾಶ ಸಿಗುತ್ತದೆ ಅದನ್ನು ನಿಭಾಯಿಸಿಕೊಂಡು ಹೋಗುವುದು ನಮ್ಮ ಧರ್ಮ' ಎಂದು ಹೆಚ್ ವಿಶ್ವನಾಥ್ ಹೇಳಿದ್ರು.
ಕುಮಾರಸ್ವಾಮಿಗೆ ತಿರುಗೇಟು:
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಮಾತೇ ಹಾಸ್ಯಾಸ್ಪದ. ಮೈತ್ರಿ ಸರ್ಕಾರದಲ್ಲಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಕಳೆದುಕೊಂಡ ನಂತರ ಸಾಕಷ್ಟು ಪರಿತಪಿಸುತ್ತಿದ್ದಾರೆ. ಅವರು ಸರಿಯಾಗಿದ್ದಿದ್ದರೆ ಇದೆಲ್ಲ ಯಾಕೆ ಆಗುತ್ತಿತ್ತು? ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ದುರಹಂಕಾರ ಮತ್ತು ಜನವಿರೋಧಿ ನೀತಿ ಕಾರಣ. ಜನತಾಂತ್ರಿಕ ವಿರೋಧಿಯಾಗಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಇವೆಲ್ಲಕ್ಕೂ ಕಾರಣವಾಯಿತು. ಹೀಗಾಗಿ ಕುಮಾರಸ್ವಾಮಿಯ ಮಾತಿನಿಂದ ಯಾರು ನಗೆಪಾಟಲಿಗೆ ಈಡಾಗುತ್ತಿದ್ದಾರೆ ಎನ್ನುವುದು ಅರಿವಾಗುತ್ತದೆ' ಎಂದು ಮತ್ತೊಮ್ಮೆ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.