ಬೆಂಗಳೂರು: ಕೆಲ ದಿನಗಳ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ಅವರು ಕೊರೊನಾ ಚಿಕಿತ್ಸೆಗೊಳಗಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳುವಾಗ ಸಂಭ್ರಮಾಚರಣೆ ಮಾಡಿದ್ದರು. ಕೋವಿಡ್ ಭೀತಿ ಮರೆತು, ಗುಂಪುಗೂಡಿ ಸಂಭ್ರಮಾಚರಣೆ ಮಾಡಿ ಕಾನೂನು ಉಲ್ಲಂಘಿಸಿದ್ದರಿಂದ ಅವರ ಸಹೋದರನನ್ನು ಜೆ.ಜೆ ನಗರ ಪೊಲೀಸರು ಬಂಧಿಸಿದ್ದಾರೆ.
ಜೂನ್ 7ರಂದು ಪಾದರಾಯನಪುರ ಇಮ್ರಾನ್ ಪಾಷಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈ ವೇಳೆ ಮನೆಯಲ್ಲೇ ಕ್ವಾರಂಟೈನ್ ಆಗಲು ಆಸ್ಪತ್ರೆ ಸಿಬ್ಬಂದಿ ಅವರಿಗೆ ಕಟ್ಟಿನಿಟ್ಟಿನ ಸೂಚನೆ ನೀಡಿದ್ದರು. ಈ ನಡುವೆ ಆಸ್ಪತ್ರೆಯಿಂದ ಹೊರ ಬಂದ ಇಮ್ರಾನ್ ತಮ್ಮ ಬೆಂಬಲಿಗರ ಜೊತೆ ಸಾಮಾಜಿಕ ಅಂತರ ಮರೆತು ಬೃಹತ್ ಜಾಥಾ ಮಾಡಿದ್ದರು.
ತಕ್ಷಣ ಈ ಪ್ರಕರಣದ ಗಂಭೀರತೆ ಅರಿತ ಜೆ.ಜೆ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಪೊರೇಟರ್ ಪಾಷಾ ಅವರನ್ನು ಬಂಧಿಸಿದ್ದರು. ತನಿಖೆಯ ವೇಳೆ ಕಾರ್ಪೊರೇಟರ್ ಪಾಷಾ ಸಹೋದರ ಇರ್ಫಾನ್ ಪಾಷ ಬೆಂಬಲಿಗರಿಗೆ ಸಂಭ್ರಮಾಚಾರಣೆ ಮಾಡಲು ಕುಮ್ಮಕ್ಕು ನೀಡಿರುವುದು ಬಯಲಾಗಿದೆ. ಇರ್ಫಾನ್ ಜೊತೆ ಮೌಸಿನ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಸದ್ಯ ಅವರನ್ನೂ ಬಂಧಿಸಿ ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗಿದೆ.
ಇಮ್ರಾನ್ ಪಾಷಾ ಸೇರಿದಂತೆ 22 ಮಂದಿಗೆ ಕೊವಿಡ್-19 ಟೆಸ್ಟ್ ನಡೆಸಲಾಗಿದ್ದು, ಅಧಿಕೃತ ವರದಿ ಕೈಸೇರದ ಹಿನ್ನೆಲೆಯಲ್ಲಿ ಹೋಟೆಲ್ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಈ ಕುರಿತ ವರದಿ ಕೈಸೇರಿದ ಬಳಿಕ ಪೊಲೀಸರು ಮುಂದಿನ ಪ್ರಕ್ರಿಯೆ ಶುರು ಮಾಡಲಿದ್ದಾರೆ. ಒಂದು ವೇಳೆ ವರದಿಯಲ್ಲಿ ನೆಗೆಟಿವ್ ಬಂದ್ರೆ ಜೈಲು ಪಾಲಾಗುವುದು ಪಕ್ಕಾ ಆಗಿದೆ.
ಪಾದರಾಯನಪುರವನ್ನು ಪಶ್ಚಿಮ ವಿಭಾಗ ಪೊಲೀಸರು ಅತಿಸೂಕ್ಷ್ಮ ಪ್ರದೇಶವನ್ನಾಗಿ ಗುರುತಿಸಿ ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ.