ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಲೋಕಸಭೆ ಚುನಾವಣೆಗೂ ಒಂದಾಗಿ ಸಾಗಿರುವ ಸಂದರ್ಭದಲ್ಲಿ ಮೈತ್ರಿ ಧರ್ಮವನ್ನೇ ಅಪಹಾಸ್ಯ ಮಾಡುವ ನಡೆಯನ್ನು ಕಾಂಗ್ರೆಸ್ ಕೈಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಉಭಯ ಪಕ್ಷಗಳ ನಡುವೆ ಮೈತ್ರಿ ಇರುವ ಸಂದರ್ಭದಲ್ಲೇ ಜೆಡಿಎಸ್‍ನ ಇಬ್ಬರು ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಮೂಲಕ ಮೈತ್ರಿಯಲ್ಲೇ ದ್ವಂದ್ವ ನೀತಿ ಪ್ರದರ್ಶಿಸುವ ಕಾರ್ಯ ಮಾಡಿದೆ. ನಿನ್ನೆ ಜೆಡಿಎಸ್‍ನ ಮಾಜಿ ಮುಖಂಡ ಹರೀಶ್‍ಗೌಡರನ್ನು ಕಾಂಗ್ರೆಸ್ ಸೆಳೆದುಕೊಂಡು ಒಂದು ಹಂತದ ಬೇಸರ ಮೂಡಿಸಿತ್ತು. ಆದರೆ ಇಂದು ಇದಕ್ಕಿಂತ ಒಂದು ಹೆಜ್ಜೆ ಮುಂದೆ ತೆರಳಿ, ಜೆಡಿಎಸ್‍ನ ಮಾಜಿ ಹಾಗೂ ಹಾಲಿ ಕಾರ್ಪೋರೇಟರ್ಗಳನ್ನು ಪಕ್ಷಕ್ಕೆ ಸೆಳೆದು ಇನ್ನೊಂದು ವಿಚಿತ್ರ ಸಂದೇಶವನ್ನು ನೀಡಿದೆ.
ಜೆಡಿಎಸ್‍ನ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಹಾಗೂ ಮಾಜಿ ಸದಸ್ಯ ಆರಿಫ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಸಚಿವ ಜಮೀರ್ ಅಹಮದ್ ನಾಯಕತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಇವರು ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಸೇರ್ಪಡೆಯಾದರು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಇವರಿಬ್ಬರನ್ನು ಕಾಂಗ್ರೆಸ್‍ಗೆ ಸೆಳೆಯುವ ಯತ್ನವನ್ನು ಜಮೀರ್ ಮಾಡಿದ್ದರು. ಆದರೆ ಕಡೆಯ ಕ್ಷಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮನವೊಲಿಕೆಯಿಂದ ಇವರು ತಟಸ್ಥವಾಗಿ ಉಳಿದಿದ್ದರು. ಜಮೀರ್ ಆಪ್ತರೆಂದೇ ಗುರುತಿಸಿಕೊಂಡಿದ್ದ ಇವರಿಗೆ ಜೆಡಿಎಸ್‍ನಲ್ಲಿ ಯಾವುದೇ ಮಾನ್ಯತೆ, ಮನ್ನಣೆ, ಸ್ಥಾನಮಾನ ಸಿಕ್ಕಿರಲಿಲ್ಲ. ಇದರಿಂದ ಪಕ್ಷ ತ್ಯಜಿಸಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.