ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರಿಸುವ ಕಾರ್ಯ ಸದ್ದಿಲ್ಲದೇ ಆರಂಭಗೊಂಡಿದೆ. ಚುನಾವಣಾ ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರಿದ್ದರೂ ಸಹ ಉದ್ದೇಶ ಪೂರಕವಾಗಿ ಮತ್ತೊಂದು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಕಾರ್ಯ ಬೆಳಕಿಗೆ ಬಂದಿದೆ.
ಇಂತಹ ಅಕ್ರಮ ಎಸಗಲು ಮಂದಾದವರನ್ನು ಒಂದು ವರ್ಷ ಜೈಲು ಶಿಕ್ಷೆಗೆ ಒಳಪಡಿಸುವುದಲ್ಲದೇ ಮತದಾನದಿಂದ ವಜಾ ಮಾಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಈಗಾಗಲೇ ಮತಪಟ್ಟಿಯಲ್ಲಿ ಹೆಸರಿದ್ದರೂ ಮತ್ತೇ ಮತ ಪಟ್ಟಿಗೆ ಹೆಸರು ಸೇರಿಸಲು ಸುಮಾರು 12 ಸಾವಿರ ಅರ್ಜಿಗಳು ಸಲ್ಲಿಕೆಯಾಗಿರುವುದು ಫೋಟೋ ಸಿಮಿಲರ್ ಎಂಟ್ರಿ ತಂತ್ರಜ್ಞಾನ ಪತ್ತೆ ಮಾಡಿದೆ. ಇದನ್ನ ಚುನಾವಣಾ ಆಯೋಗದ ಗಮನಕ್ಕೂ ತರಲಾಗಿದೆ.
ಕಳೆದ ಜುಲೈ- ಆಗಸ್ಟ್ನಲ್ಲಿ ಭಾರತ ಚುನಾವಣಾ ಆಯೋಗ ಹೊಸದಾಗಿ ಅಭಿವೃದ್ಧಿಪಡಿಸಿದ ಫೋಟೋ ಸಿಮಿಲರ್ ಎಂಟ್ರಿ ತಂತ್ರಜ್ಞಾನ ಸಹಾಯದಿಂದ ಕಲಬುರಗಿ ಜಿಲ್ಲೆಯಲ್ಲಿ 90 ಸಾವಿರಕ್ಕೂ ಹೆಚ್ಚು ಹೆಸರನ್ನು ಡಿಲೀಟ್ ಮಾಡಲಾಗಿದ್ದರೂ, ಪ್ರಸಕ್ತ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಭಾವಚಿತ್ರ , ವಿಳಾಸ ಬದಲಾಯಿಸಿ ಸುಮಾರು 12 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ.
ವಿಶೇಷವಾಗಿ ಕಲಬುರಗಿ ಉತ್ತರ ಮತ್ತು ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಇಂತಹ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾಗಿವೆ. ನಿಧನ ಮತ್ತು ಡಬಲ್ ಎಂಟ್ರಿ ಪ್ರಕರಣದಲ್ಲಿ ಒಟ್ಟಾರೆ ಜಿಲ್ಲಾದ್ಯಂತ 36,319 ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂದು ಡಿ.ಸಿ. ಮಾಹಿತಿ ನೀಡಿದರು.
ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಗಲಾಟೆ: ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಯತ್ನ