ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕಾವೇರಿ ತಂತ್ರಾಂಶ 2.0 ಜಾರಿಗೆ ತಂದಿದ್ದು, ಇನ್ನು ಮೂರು ತಿಂಗಳಲ್ಲಿ ರಾಜ್ಯದ ಎಲ್ಲ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಜಾರಿಗೆ ತರಲಾಗುವುದು. ಈ ವ್ಯವಸ್ಥೆಯಿಂದ 7 ರಿಂದ 10 ನಿಮಿಷದಲ್ಲೇ ಆಸ್ತಿ ನೋಂದಣಿ ಮುಗಿಯಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಕಾವೇರಿ 2.0 ತಂತ್ರಾಂಶ ಹೊಸ, ನವೀನ, ನಾಗರೀಕ ಸ್ನೇಹಿ, ವಂಚನೆ ರಹಿತ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಾಂಶ ಈಗಾಗಲೇ ಬಳಕೆದಾರರ ಸ್ವೀಕಾರ ಪರೀಕ್ಷೆಗೆ (ಯುಎಟಿ) ಒಳಪಟ್ಟಿದ್ದು, ಪ್ರಾಯೋಗಿಕವಾಗಿ ಚಿಂಚೋಳಿ ಹಾಗೂ ಬೆಳಗಾವಿ ದಕ್ಷಿಣ ಉಪ ನೋಂದಣಿ ಕಚೇರಿಗಳಲ್ಲಿ ಫೈಲಟ್ ಆಧಾರದ ಮೇಲೆ ಅಳವಡಿಸಲಾಗಿದೆ ಎಂದು ಹೇಳಿದರು.
ಈ ತಂತ್ರಾಂಶದಿಂದ ಮಧ್ಯವರ್ತಿಗಳ ಹಾವಳಿ ಕಡಿಮೆ ಆಗಲಿದೆ. ವರ್ಷದೊಳಗೆ ಕೈಯಲ್ಲಿ ಅರ್ಜಿ ಹಾಕುವುದನ್ನು ತಪ್ಪಿಸಿ, ಆನ್ಲೈನ್ ಮಾಡುತ್ತೇವೆ. ಆಸ್ತಿ, ವಿವಾಹ ಸೇರಿದಂತೆ ಕಂದಾಯ ಇಲಾಖೆಯ ಎಲ್ಲ ರೀತಿಯ ನೋಂದಣಿಗಳು ಆನ್ಲೈನ್ನಲ್ಲೇ ಮಾಡಲಾಗುವುದು. ಈ ಮೊದಲು ಬೆಳಗ್ಗೆಯಿಂದ ಸಂಜೆವರೆಗೂ ಕಾಯಬೇಕಿತ್ತು. ಕ್ಯೂನಲ್ಲಿ ದಿನಗಟ್ಟಲೆ ನಿಲ್ಲಬೇಕು, ಬ್ಯಾಟರಿ ಇಲ್ಲ, ಸರ್ವರ್ ಡೌನ್ ಸೇರಿದಂತೆ ಮತ್ತಿತರ ಸಮಸ್ಯೆಗಳ ಕುರಿತು ಹಲವಾರು ಮಂದಿ ದೂರು ನೀಡಿದ್ದರು.
ಕಳೆದ 75 ವರ್ಷಗಳಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಅದಕ್ಕೆ ಪರಿಹಾರ ಮಾಡಿದ್ದೇವೆ. ನೋಂದಣಿ ಮಾಡುವ ಮೊದಲು ಮನೆಯಲ್ಲೇ ಕುಳಿತು ಡೀಡ್ ಅನ್ನು ಉಪನೋಂದಣಾಧಿಕಾರಿ ಕಚೇರಿಗೆ ಕಳುಹಿಸಿದರೆ ಅದರಲ್ಲಿ ಉಪ ನೋಂದಣಾಧಿಕಾರಿ ತಪ್ಪಿದ್ದರೆ ತಿದ್ದಿ ಕಳುಹಿಸುತ್ತಾರೆ. ನಂತರ ಎಲ್ಲವೂ ಸರಿಯಾಗಿದ್ದರೆ ನಿಗದಿತ ಹಣ ಕಟ್ಟಲು ಸೂಚನೆ ನೀಡುತ್ತಾರೆ. ಎಲ್ಲವೂ ಸರಿಯಾದ ಬಳಿಕ ಸ್ಲಾಟ್ ಬುಕ್ ಮಾಡಲಾಗುತ್ತದೆ. ಆ ವೇಳೆ ಹೋಗಿ ಫೋಟೊ, ಸಹಿ, ಹೆಬ್ಬೆಟ್ಟು ಹಾಕಿ ನೋಂದಣಿ ಮಾಡಿಸಿಕೊಳ್ಳಬಹುದು. ಇದರಿಂದ ಡೇಟಾ ಎಂಟ್ರಿ ಕಡಿಮೆ ಆಗಲಿದೆ. ಆನ್ಲೈನಲ್ಲೇ ಇ.ಸಿ ಮತ್ತು ಪ್ರಮಾಣ ಪತ್ರ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಕಾವೇರಿ ತಂತ್ರಜ್ಞಾನ 2 ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಇದನ್ನು ಬೆಳಗಾವಿ ದಕ್ಷಿಣ, ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿದೆ. ಡಿಡಿ ಮತ್ತು ಚಲನ್ ಹಿಂದೆ ಸ್ಕ್ಯಾಮ್ ಆಗಿತ್ತು. ಯಾರದ್ದೋ ಹೆಸರಿಗೆ ಡಿಡಿ ಹೋಗುತ್ತಿತ್ತು. ಈಗ ಅವರ ಬ್ಯಾಂಕ್ ಅಕೌಂಟ್ನಿಂದ ನೇರವಾಗಿ ಇಲಾಖೆ ಖಾತೆಗೆ ವರ್ಗಾವಣೆ ಆಗಲಿದೆ. ಸರ್ವರ್ ಸಮಸ್ಯೆ ಕೂಡ ಇರುವುದಿಲ್ಲ. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜನರ ಗುಂಪು ಕೂಡ ಇರುವುದಿಲ್ಲ. ಅವರ ಸಮಯದಲ್ಲಿ ಬಂದು ಹೋಗಬಹುದು ಎಂದು ಹೇಳಿದರು.
ಹೊಸ ವ್ಯವಸ್ಥೆ: ಉಪನೋಂದಣಾಧಿಕಾರಿ ಕಚೇರಿ ಇನ್ನು ಮುಂದೆ ಹೊಸ ರೂಪ ಪಡೆಯಲಿದೆ. ಪಾಸ್ಪೋರ್ಟ್ ಕಚೇರಿ ರೀತಿಯಲ್ಲಿ ಕಾರ್ ಪಾರ್ಕಿಂಗ್, ವಿಶ್ರಾಂತಿ ಕೊಠಡಿ, ಲಿಫ್ಟ್, ವಿಕಲಚೇತನರಿಗಾಗಿ ರ‍್ಯಾಂಪ್ ಎಲ್ಲವನ್ನೂ ಮಾಡಲು ಸೂಚನೆ ನೀಡಲಾಗಿದೆ. ಹಲವು ಕಚೇರಿಗಳಲ್ಲಿ ಇದನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಮಗೆ 17 ಸಾವಿರ ಕೋಟಿ ರೂ. ಗುರಿ ನೀಡಲಾಗಿತ್ತು. ಅದಕ್ಕಿಂತ ಹೆಚ್ಚು ತಲುಪಿದ್ದೇವೆ. ಕಂದಾಯ ಕಟ್ಟಲು ರಿಯಾಯಿತಿ ನೀಡಲಾಗಿತ್ತು. ಮುಂದ್ರಾಂಕ ಶುಲ್ಕದಲ್ಲೂ ರಿಯಾಯಿತಿ ನೀಡಲಾಗಿತ್ತು. ಮೊದಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಲು ಪಹಣಿ, ನಿಕಲಿನ ದಾಖಲೆ ನೀಡಿ ನೋಂದಣಿ ಮಾಡಿಸಲಾಗುತಿತ್ತು. ಈಗ ಉಪನೋದಣಾಧಿಕಾರಿ ಕಚೇರಿಯಲ್ಲೇ ಎಲ್ಲ ದಾಖಲೆಗಳು ಲಭ್ಯ ಇರಲಿದೆ. ಖಾತೆ, ಪಹಣಿ, ಸರ್ವೇ ನಂಬರ್ ಎಲ್ಲಾ ದಾಖಲೆ ಉಪ ನೋಂದಣಾಧಿಕಾರಿ ಕಚೇರಿಯಲ್ಲೇ ಇರಲಿದೆ. ನೋಂದಣಿ ಆದ ಬಳಿಕ ದಾಖಲೆಗಳು ಮಾಲೀಕರ ಡಿಜಿ ಲಾಕರ್ಗೆ ಹೋಗಲಿದೆ. ಮನೆಯಲ್ಲೇ ಕುಳಿತು ದಾಖಲೆ ಪಡೆಯಬಹುದು ಎಂದು ವಿವರಿಸಿದರು.
ಕಾಲ್ ಸೆಂಟರ್: ನಾಗರಿಕರಿಗೆ ಜಾಗೃತಿ ಮೂಡಿಸಲು ಹೊಸ ವ್ಯವಸ್ಥೆಯಲ್ಲಿ ಸಹಾಯ ಮಾಡಲು ಅರ್ಜಿಯ ಸ್ಥಿತಿಯನ್ನು ತಿಳಿಯಲು ಮತ್ತು ಕುಂದು ಕೊರತೆಗಳನ್ನು ದಾಖಲಿಸಲು ಕಾಲ್ ಸೆಂಟರ್ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ತಲೆತಗ್ಗಿಸುವಂತಹ ಹೇಳಿಕೆ ಕೊಟ್ಟಿದ್ದಾರೆ: ಸಚಿವ ಆರ್ ಅಶೋಕ್