ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಚ ಸ್ವೀಕಾರ ಆರೋಪಗಳಡಿ ಬಂಧನಕ್ಕೊಳಗಾಗಿ ಅಮಾನತ್ತಿನಲ್ಲಿದ್ದ ಕೆಎಎಸ್ ಅಧಿಕಾರಿ ಎಲ್ ಸಿ ನಾಗರಾಜ್ ಹುದ್ದೆಗೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನ ಸರ್ಕಾರ ಅಂಗೀಕರಿಸಿದೆ.
ಲಂಚ ಸ್ವೀಕಾರ ಆರೋಪದಡಿ ಈಗಾಗಲೇ ಅಮಾನತ್ತಿನಲ್ಲಿದ್ದ ಎಲ್ ಸಿ ನಾಗರಾಜ್ ತಮ್ಮ ವೈಯಕ್ತಿಕ ಕಾರಣಗಳ ನಿಮಿತ್ತ ಕೆ ಎ ಎಸ್ (ಕಿರಿಯ ಶ್ರೇಣಿ) ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಅವರ ರಾಜೀನಾಮೆಯನ್ನ ಸರ್ಕಾರ ಅಂಗೀಕರಿಸಿದೆ. ಆದರೆ, ಅವರ ವಿರುದ್ಧ ಹೂಡಲು ಪ್ರಸ್ತಾಪಿಸಲಾಗಿರುವ, ಪರಿಶೀಲನೆಯಲ್ಲಿರುವ ಮತ್ತು ಈಗಾಗಲೇ ಹೂಡಲಾಗಿರುವ ತನಿಖಾ ಹಂತದಲ್ಲಿರುವ ಶಿಸ್ತು ಕ್ರಮ ಪ್ರಕರಣಗಳು, ಇಲಾಖಾ ವಿಚಾರಣೆ ಪ್ರಕರಣಗಳು, ಜಂಟಿ ಇಲಾಖಾ ವಿಚಾರಣೆ ಪ್ರಕರಣಗಳು, ಲೋಕಾಯುಕ್ತ ಪ್ರಕರಣಗಳು, ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆ ಪ್ರಕರಣಗಳನ್ನು ನಿಯಮಾನುಸಾರ ಮುಂದುವರಿಸುವ ಹಾಗೂ ಭವಿಷ್ಯದಲ್ಲಿಯೂ ಸಹ ಇವರ ವಿರುದ್ಧ ಯಾವುದೇ ಇಲಾಖೆಯಲ್ಲಿ ಶಿಸ್ತು ಕ್ರಮ ಪ್ರಕರಣಗಳನ್ನು / ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಪ್ರಕರಣಗಳನ್ನು ಹೂಡುವ ಸಂಭವವಿದ್ದಲ್ಲಿ ನಿಯಮಾನುಸಾರ ಹೂಡುವ ಷರತ್ತಿಗೆ ಒಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಐಎಂಎ ವಂಚನೆ ಪ್ರಕರಣ : ಸಕ್ಷಮ ಪ್ರಾಧಿಕಾರದಿಂದ ಗ್ರಾಹಕರಿಗೆ ಚಿನ್ನ ವಾಪಸ್
ಒಂದು ಲಕ್ಷ ಷೇರುದಾರರಿಂದ 4,000 ಕೋಟಿ ದೋಚಿ, ವಂಚಿಸಿದ್ದ ಐ ಮಾನಿಟರಿ ಅಡ್ವೈಸರಿ (ಐ ಎಂ ಎ) ಕಂಪನಿ ಪರ ವರದಿ ಕೊಡಲು 4.5 ಕೋಟಿ ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್. ಸಿ. ನಾಗರಾಜ್ ಬಂಧನಕ್ಕೊಳಗಾಗಿದ್ದರು. ಕೆ ಎ ಎಸ್ 1998ನೇ ಬ್ಯಾಚ್‌ಗೆ ಸೇರಿದ ಇವರು, ಮೂರು ಕಂತುಗಳಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಐಎಂಎ ಠೇವಣಿದಾರರಿಂದ ಕ್ಲೈಮ್ಗೆ ಅರ್ಜಿ ಆಹ್ವಾನಿಸಿದ ಸಕ್ಷಮ ಪ್ರಾಧಿಕಾರ
ಎಲ್ ಸಿ ನಾಗರಾಜ್ ಅವರ ನೆಲಮಂಗಲ ಪರಮಣ್ಣ ಬಡಾವಣೆಯ ಮೇಲೆ ಈ ಹಿಂದೆ ಎಸಿಬಿ ದಾಳಿ ನಡೆದಿತ್ತು. ಎಲ್ ಸಿ ನಾಗರಾಜ್ ಹಾಗೂ ಸಂಬಂಧಿಗಳ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ನಗದು, ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.
ಹಿರಿಯ ಅಧಿಕಾರಿಯೊಬ್ಬರು ಬೇಕು ಅಂತಲೇ ದಾಳಿ ಮಾಡಿಸಿದ್ದಾರೆ. ನಾನು ಪ್ರಮಾಣಿಕವಾಗಿ ಇದ್ದೇನೆ. ಪದೇ ಪದೇ ನನ್ನ ಮೇಲೆ ದಾಳಿ ಮಾಡಲಾಗುತ್ತಿದೆ. ದಾಳಿಗೆ ಭಯ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ನನ್ನನ್ನು ಗುರಿಯಾಗಿಸಿ ಇದು 3 ನೇ ಬಾರಿ ದಾಳಿ ಮಾಡಲಾಗಿದೆ. ವಶಪಡಿಸಿಕೊಂಡಿರುವ ಹಣಕ್ಕೆ ದಾಖಲಾತಿಗಳು ಇವೆ. ನನ್ನ ಪತ್ನಿಗೆ ಸಂಬಂಧಿಸಿದ ಆಸ್ತಿ ಮಾರಾಟ ಮಾಡಲು ಯತ್ನಿಸಿದ್ದೆ. 2.4 ಕೋಟಿಗೆ ಆಸ್ತಿ ಮಾರಾಟ ಮಾಡಿದ್ದೆ. ಅದರ ಹಣವನ್ನು ನಾನು ಪಡೆದಿದ್ದೆ. ಎಲ್ಲಾ ಕೂಡ ವೈಟ್ ಎಂದು ನಾಗರಾಜ್ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಐಎಂಎ ವಂಚನೆ ಪ್ರಕರಣ : ಸಕ್ಷಮ ಪ್ರಾಧಿಕಾರದಲ್ಲಿ ಖಾಲಿಯಿದ್ದ ಹುದ್ದೆಗೆ ಅಧಿಕಾರಿಗಳ ನೇಮಕ