ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ರಚನೆ ಮಾಡಿರುವ ಎಸ್ಐಟಿ ತಂಡ ಇಂದು ಕಮರ್ಷಿಯಲ್ ಸ್ಟರೀಟ್ನಲ್ಲಿರುವ ಐಎಂಎ ಜ್ಯುವೆಲರಿಗೆ ಭೇಟಿ ನೀಡಿದೆ. ತಂಡದಲ್ಲಿ ಡಿವೈಎಸ್ಪಿ ರವಿಶಂಕರ್, ಬಾಲರಾಜ್ ಹಾಗೂ ನಾಲ್ವರು ಇನ್ಸ್ಪೆಕ್ಟರ್ಗಳು ಇದ್ದು, ಜ್ಯುವೆಲರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನ ಕರೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಈಗಾಗಲೇ ಬಂಧಿಸಲ್ಪಟ್ಟ ಐಎಂಎ ನಿರ್ದೇಶಕರನ್ನು ಕಚೇರಿ ಒಳಗಡೆ ಕರೆದುಕೊಂಡು ಹೋಗಿ ಅವರಿಂದ ಕಚೇರಿಯ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ. ಇನ್ನು, ಐಎಂಎ ಜ್ಯುವೆಲರಿ ಶೋಧ ಮಾಡುವ ವಿಚಾರದ ಪ್ರತಿ ಭಾಗವನ್ನು ಸಹ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದು, ಕೆಲವು ಚಿನ್ನ ಹಾಗೂ ವಜ್ರ ಪರಿಶೋಧಕರನ್ನು ಕರೆಸಿ, ಚಿನ್ನ ಅಥವಾ ವಜ್ರ ಸಿಕ್ಕರೆ ಅದು ನಕಲಿಯೋ ಅಸಲಿಯೋ ಎಂದು ಪರಿಶೀಲನೆ ನಡೆಸಲಿದ್ದಾರೆ. ಇನ್ನು, ಜ್ಯುವೆಲರಿ ಬಳಿ ಹೂಡಿಕೆದಾರರು ಜಮಾಯಿಸೋ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆ ಸಲುವಾಗಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಂದ ಐಎಂಎ ಪ್ರಧಾನ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಇದೇ 18ರಂದು ಜಯನಗರ ಐಎಂಎ ಜ್ಯುವೆಲರಿ ಹಾಗೂ ಮನ್ಸೂರ್ ಮೂರನೇ ಪತ್ನಿ ಮನೆಯನ್ನ ಎಸ್ಐಟಿ ಪರಿಶೀಲಿಸಿದಾಗ, ಜಯನಗರದ ಜ್ಯುವೆಲರಿ ಮತ್ತು ಪತ್ನಿ ಮನೆಯಲ್ಲಿ 13 ಕೋಟಿ ಮೌಲ್ಯದ 43 ಕೆಜಿ ಚಿನ್ನ,17 ಕೋಟಿ ಮೌಲ್ಯದ 5864 ಕ್ಯಾರೆಟ್ ಡೈಮಂಡ್ ಹಾಗೂ 5 ಕೋಟಿ ಮೌಲ್ಯದ 520 ಕೆಜಿ ಬೆಳ್ಳಿ, 1.5 ಕೋಟಿ ಮೌಲ್ಯದ ಸೈಲ್ಟರ್ ಡೈಮಂಡ್ ಪತ್ತೆಯಾಗಿತ್ತು. ಹೀಗಾಗಿ ಕಮರ್ಷಿಯಲ್ ಸ್ಟ್ರೀಟ್ ಬಳಿ ಇರುವ ಐಎಂಎ ಕಚೇರಿಯಲ್ಲಿ ಏನಾದ್ರು ಸಿಗಬಹುದು ಅನ್ನೋ ನಿಟ್ಟಿನಲ್ಲಿ ಎಸ್ಐಟಿ ಶೋಧ ಕಾರ್ಯ ಮುಂದುವರೆಸಿದೆ.