ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಹಗರಣದ ಆರೋಪಿಗಳಾದ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ ಎಂ ವಿಜಯಶಂಕರ್ ಮತ್ತು ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್ ಸಿ ನಾಗರಾಜ್ ಅವರಿಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿರುವ ನ್ಯಾಯಾಲಯ ಇದೇ 25ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಸದ್ಯ ಎಸ್‌ಐಟಿ ವಶದಲ್ಲಿರುವ ವಿಜಯ ಶಂಕರ್ ಮತ್ತು ನಾಗರಾಜ್ ಮಧ್ಯಂತರ ಜಾಮೀನು ಕೋರಿ ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆರೋಪಿಗಳ ಪರ ವಾದಿಸಿದ ವಕೀಲರು ಅರ್ಜಿದಾರರು ಮುಗ್ಧರು ಮತ್ತು ಸರ್ಕಾರಿ ನೌಕರರು. ಮಧ್ಯಂತರ ಜಾಮೀನು ನೀಡದೇ ಹೋದರೆ ಅವರ ಸಂವಿಧಾನದತ್ತ ಮೂಲಭೂತ ಹಕ್ಕು ಉಲ್ಲಂಘನೆ ಆಗುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದರು.
ಇದಕ್ಕೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ನಾರಾಯಣ ರೆಡ್ಡಿ ವಾದ ಮಂಡನೆ ಮಾಡಿ, ಆರೋಪಿಗಳು ಕಾನೂನು ಪ್ರಕಾರ ನಡೆದುಕೊಂಡಿಲ್ಲ. ಮೇಲ್ನೋಟಕ್ಕೆ ಅವರ ವಿರುದ್ಧದ ಅಪರಾಧ ಸಾಬೀತಾಗುವಂತಿದೆ ಎಂದು ವಾದ ಮಂಡಿಸಿದ್ರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮಧ್ಯಂತರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು. ಈ ವೇಳೆ ಡಿಸಿ ವಿಜಯಶಂಕರ್ ಭಾವುಕರಾಗಿದ್ದರು ಎಂದು ತಿಳಿದು ಬಂದಿದೆ.